ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜೋರಾಗಿದೆ. ಬಹುಮತ ಇರುವ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯನ್ನು ತಮ್ಮತ್ತ ಸೆಳೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ರೆಡ್ಡಿ ಅವರು ಸಿಎಂ ನಿವಾಸ ಕಾವೇರಿಯಲ್ಲಿ ಸೋಮವಾರ ಭೇಟಿ ಮಾಡಿರುವುದು ಇದನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಂಬಂಧಿಸಿ ರಾಜ್ಯಸಭಾ ಚುನಾವಣೆ ಏಜೆಂಟ್ ಆಗಿ ಯೋಗೇಂದ್ರ ವಿಕ್ರಂ ಅವರನ್ನು ನೇಮಕ ಮಾಡಲಾಗಿದೆ. ಇವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಪತ್ರ ಕೊಡುವ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಶಿವರಾಜ್ ತಂಗಡಗಿ ಇರುವುದು ಈ ಅನುಮಾನವನ್ನು ಮತ್ತಷ್ಟು ದೃಢಪಡಿಸಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಜತೆಗಿದ್ದರು.
ವಿಧಾನಸಭೆಯಿಂದ ರಾಜ್ಯಸಭೆಗೆ ಮಂಗಳವಾರ (ಫೆ. 27) ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಅವರು ಯೋಗೇಂದ್ರ ವಿಕ್ರಂ ಅವರನ್ನು ಚುನಾವಣೆ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ. ಇವರು ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತರಾಗಿದ್ದಾರೆ. ಹೀಗಾಗಿ ರೆಡ್ಡಿ ಮತ ಕಾಂಗ್ರೆಸ್ಗೆ ಖಚಿತ ಎಂದೇ ಹೇಳಲಾಗುತ್ತಿದೆ.
ಈ ಬಗ್ಗೆ ವಿಕ್ರಂ ಅವರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಸೋಮವಾರ ಪತ್ರ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು.