ಗಾಂಧಿನಗರ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತವೆಯೋ, ಅಲ್ಲಿಂದ ಮೋದಿ ಗ್ಯಾರಂಟಿ (Modi Guarantee)ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಯ ನೀಡಿದರು. ಗುಜರಾತ್ (Gujarat) ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರಿಂದು ರಾಜ್ಕೋಟ್, ಪಂಜಾಬ್ನ ಬಟಿಂಡಾ, ಉತ್ತರ ಪ್ರದೇಶದ ರಾಯ್ಬರೇಲಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11,500 ಕೋಟಿ ರೂ. ವೆಚ್ಚದ 200ಕ್ಕೂ ಹೆಚ್ಚು ಆರೋಗ್ಯ ರಕ್ಷಣೆ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೇ 48,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ದೇಶಕ್ಕೆ ಸಮರ್ಪಿಸಿದರು. ಬಳಿಕ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಕಳೆದ 6-7 ದಶಕಗಳಲ್ಲಿ ನಡೆದಿದ್ದಕ್ಕಿಂತ ಹಲವು ಪಟ್ಟು ವೇಗವಾಗಿ ನಮ್ಮ ಸರ್ಕಾರದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಲ್ಲಿ ಇತರರ ಗ್ಯಾರಂಟಿಗಳು ಕೊನೆಗೊಳ್ಳುತ್ತವೆಯೋ ಅಲ್ಲಿಂದ ಮೋದಿ ಗ್ಯಾರಂಟಿ ಪ್ರಾರಂಭವಾಗುತ್ತದೆ ಎಂದು ಆಶ್ವಾಸನೆ ನೀಡಿದರು.
ಸ್ವಾತಂತ್ರ್ಯಾ ನಂತರ 50 ವರ್ಷಗಳ ವರೆಗೆ ದೇಶದಲ್ಲಿ ಒಂದೇ ಒಂದು AIIMS ಆಸ್ಪತ್ರೆ ಇತ್ತು. ಸ್ವಾತಂತ್ರ್ಯಾ ನಂತರ 7 ದಶಕಗಳಲ್ಲಿ 7 ಏಮ್ಸ್ ಆಸ್ಪತ್ರೆಗಳಿಗೆ ಅನುಮೋದನೆ ನೀಡಿದ್ದರೂ ಹಿಂದಿನ ಸರ್ಕಾರಗಳು ಅವುಗಳನ್ನು ಪೂರ್ಣಗೊಳಿಸಿಲ್ಲ. ಕೆಲವರಂತೂ ತಮ್ಮ ರಾಜ್ಯಗಳಿಗೆ ಏಮ್ಸ್ ಆಸ್ಪತ್ರೆ ಪಡೆಯುವಷ್ಟರಲ್ಲಿ ಸುಸ್ತಾಗುತ್ತಿದ್ದರು. ಆದ್ರೆ ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ 10 ಏಮ್ಸ್ ಆಸ್ಪತ್ರೆಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ಅವಧಿಯಲ್ಲಿ ಏಮ್ಸ್ ಹೊರತುಪಡಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳೂ ಒಂದರ ಹಿಂದೆ ಒಂದರಂತೆ ತಲೆ ಎತ್ತುತ್ತಿವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.