ಬೆಂಗಳೂರು:- ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಗೆ ನಮ್ಮ ಸರ್ಕಾರ 250 ಕೋಟಿ ರೂ. ನೀಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಡೆಗಣಿಸಿದ್ದು, 50 ಕೋಟಿಯನ್ನೂ ಕೊಟ್ಟಿಲ್ಲ ಎಂದರು.
ಅರ್ಚಕರಿಗೆ ತಪ್ಪು ಮಾಹಿತಿ ಕೊಡಲಾಗಿದೆ. ಅವರು ಪತ್ರಿಕಾಗೋಷ್ಠಿ ಮಾಡುವಂತಾಗಿದೆ. ಅರ್ಚಕರಿಗೆ ಮನೆ ಕೊಟ್ಟದ್ದು ನಮ್ಮ ಸರ್ಕಾರ. ತಸ್ತೀಕ್ ತಂದದ್ದು ನಮ್ಮ ಸರ್ಕಾರ. ಅದನ್ನು 48 ಸಾವಿರಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಇದೆಲ್ಲವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನದ ಒಟ್ಟು ಆದಾಯದಿಂದ ಶೇ.10 ಪಡೆಯುವ ಮಸೂದೆ ಜಾರಿಗೆ ಮುಂದಾದುದರಿಂದ ದೇವಸ್ಥಾನದ ಒಟ್ಟು ಆರ್ಥಿಕ ವ್ಯವಸ್ಥೆ ಕುಸಿಯಬಾರದೆಂಬ ಕಾರಣಕ್ಕೆ ವಿರೋಧಿಸಿದ್ದೇವೆ. ಆದರೆ, ಬಿಜೆಪಿಯವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ತುಂಬಾ ದೇವಸ್ಥಾನಗಳಲ್ಲಿ ಶಾಲೆ, ಗೋಶಾಲೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ಅನ್ನ ಪ್ರಸಾದ, ಸಪ್ತಪದಿ (ಮದುವೆ) ವ್ಯವಸ್ಥೆ ಇದೆ. ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಮೊನ್ನೆ ದೇಗುಲಗಳ ಮಸೂದೆಯನ್ನು ಬಿಜೆಪಿ- ಜೆಡಿಎಸ್ ಸದಸ್ಯರು ವಿರೋಧಿಸಿದ್ದಾರೆ. ನಾವು ಅರ್ಚಕರಿಗೆ- ದೇವಾಲಯಗಳಿಗೆ ಒಳ್ಳೆಯದು ಮಾಡಲು ಹೊರಟಿದ್ದೆವು. ಆದರೆ ಬಿಜೆಪಿ ಇದನ್ನು ವಿರೋಧಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಹಿರಿಯ ಸಚಿವ ಹೆಚ್.ಕೆ.ಪಾಟೀಲ್, ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರು ಆರೋಪಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ವಾಸ್ತವಿಕವಾಗಿ ದೇವಾಲಯಗಳ ಅಭಿವೃದ್ಧಿಗಾಗಿ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್ ಕೊಡುವ ಯೋಜನೆ ರೂಪಿಸಿದ್ದೇ ಬಿಜೆಪಿ ಎಂದು ವಿವರಿಸಿದರು