ಬೆಂಗಳೂರು:- ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ. ತನ್ನ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವಂತೆ ಖಾಸಗಿ ದೂರು ಸಲ್ಲಿಸಿದ್ದಾರೆ.
ಪ್ರತಾಪ್ ಸಿಂಹ ಒಬ್ಬ ದೊಡ್ಡ ಅಯೋಗ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಾಯಿ ಮುಚ್ಕಂಡು ಸುಮ್ಮನಿದ್ದರೆ ಸರಿ. ಇಲ್ಲವಾದಲ್ಲಿ ಇಡೀ ಕಾಂಗ್ರೆಸ್ ಪಾಳಯ ಮೈಸೂರಿಗೆ ಇಳಿಯಬೇಕಾಗುತ್ತೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ ಕೆ ಸುಧಾಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ತಾನು ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಸಿದ್ಧ ಎಂದು ಪ್ರದೀಪ್ ಈಶ್ವರ್ ಗುಡುಗಿದ್ದರು. ಸದ್ಯ ಈಗ ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ನನ್ನ ವಿರುದ್ಧ ಮಾಧ್ಯಮಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಮುಠಾಳ, ಅಯೋಗ್ಯ ಎಂಬಿತ್ಯಾದಿ ನಿಂದನತ್ಮಾಕ ಶಬ್ದಗಳಿಂದ ತೇಜೋವಧ ಮಾಡಲು ಪ್ರಯತ್ನಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜನರಿಗೆ ನನ್ನ ಮೇಲೆ ತಪ್ಪು ಅಭಿಪ್ರಾಯ ಮೂಡಲು ದಾರಿಮಾಡಿಕೊಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಕನಿಷ್ಠ ಸೌಜನ್ಯವನ್ನು ಕೂಡ ತೋರದ ಚಾರಿತ್ರ್ಯ ವಧೆ ಮಾಡುವ ಮಾತುಗಳನ್ನು ಆಡಿದ್ದಾರೆ. ಹಾಗೂ ನನ್ನನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ಖಾಸಗಿ ದೂರು ಸಲ್ಲಿಸಿದ್ದಾರೆ.