ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷಕ್ಕೆ ಭಾರೀ ಮುಜುಗರ ಸೃಷ್ಟಿಸಿರುವ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿಯಿಂದಲೇ ಉಚ್ಛಾಟಿಸುವ ಸಾಧ್ಯತೆ ಇದೆ. ಪಕ್ಷದ ವ್ಹಿಪ್ ಉಲ್ಲಂಘಿಸಿ ಕಾಂಗ್ರೆಸ್ ಪರವಾಗಿ ಮತ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಘಟಕ ಸೋಮಶೇಖರ್ರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕೆಂದು ಕೇಂದ್ರದ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಿದೆ.
ರಾಜ್ಯಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆ ಅಂತ್ಯವಾಗಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ. ಅವಧಿ ಮುಗಿದರೂ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮತದಾನಕ್ಕೆ ಹಾಜರಾಗಿಲ್ಲ. ಒಂದೇ ದಿನ ಇಬ್ಬರು ಶಾಸಕರು ಬಿಜೆಪಿಗೆ ಕೈ ಕೊಡುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತ್ತೊಂದು ಡಬಲ್ ಶಾಕ್ ಎದುರಾಗಿದೆ
ಬೆಳಗ್ಗೆ ಬಿಜೆಪಿ ನಾಯಕರು ಸಂಪರ್ಕಿಸಿದಾಗ ಪಕ್ಷದ ಪರವಾಗಿ ಇರುತ್ತೇನೆ ಎಂದಿದ್ದರು. ಆದರೆ ಮತದಾನಕ್ಕೆ ಗೈರಾಗಿರುವ ಶಿವರಾಮ್ ಹೆಬ್ಬಾರ್ ಅವರು ಕೊನೆಗೂ ಬಿಜೆಪಿಗೆ ಕೈ ಕೊಟ್ಟಿದ್ದಾರೆ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಇಬ್ಬರ ಈ ನಿರ್ಧಾರದಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆ ಆಗಿದೆ.