ಬೆಂಗಳೂರು: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದಲ್ಲ. ಹಿಂದೆ ತುಂಬಾ ಜನ ಸೋತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಎಸ್ಟಿ ಸೋಮಶೇಖರ್ ಕ್ರಾಸ್ ವೋಟ್, ಮೈತ್ರಿ ಕೂಟಕ್ಕೆ ಎರಡನೇ ಸೋಲು ವಿಚಾರವಾಗಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರೂ ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಸೋಮಶೇಖರ್ ನಡೆ ನಿರೀಕ್ಷಿತವೇ ಆಗಿತ್ತು. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕರೆದುಕೊಂಡು ಹೋದವರು ಯಾರು ಎಂದು ನಮಗೂ ಗೊತ್ತಿದೆ ಎಂದರು
ಸಿದ್ದರಾಮಯ್ಯರಿಗೆ ಹೇಳ್ತೇನೆ. ನಿಮ್ಮ ಅವಲೋಕನ ನೀವೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ನಿರೀಕ್ಷೆಗಳು ಇಟ್ಕೊಂಡಿದ್ವಿ. ಈ ಸೋಲು ಆಡಳಿತ ಯಂತ್ರದ ದುರುಪಯೋಗ. ಕಳೆದ ಎರಡು ದಿನಗಳ ಹಿಂದೆಯೇ ಹೀಗೆ ಆಗುತ್ತದೆ ಎಂದು ನಿರೀಕ್ಷೆ ಮಾಡಿದ್ದೆ. ನಮಗೂ ಮಾಹಿತಿ ಕೊಡೋರು ಇರ್ತಾರೆ. ಒಂದು ಬಾರಿ ಏರಿಕೆ, ಇಳಿಕೆ ಆಗುತ್ತದೆ ಎಂದು ತಿಳಿಸಿದರು.
ಡಾ. ಮಂಜುನಾಥ್ ಸ್ಪರ್ಧೆ ಖಚಿತ ಎಂಬ ಪ್ರಶ್ನೆಗೆ, ಯಾಕೆ ಇಷ್ಟೊಂದು ಅರ್ಜೆಂಟ್? ಈಗಷ್ಟೇ ಅಖಾಡ ಶುರುವಾಗುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.