‘ಬಿಗ್ ಬಾಸ್ ಸೀಸನ್ 10’ರ ಸ್ಪರ್ಧಿ ವಿನಯ್ ಗೌಡ ಸೋಷಿಯಲ್ ಮೀಡಿಯಾ ಫೇಕ್ ಪ್ರಮೋಟರ್ ವಿರುದ್ಧ ಗರಂ ಆಗಿದ್ದಾರೆ. ಮಾಡದ ತಪ್ಪಿಗೆ ತನ್ನ ವಿರುದ್ಧ ಪಿತೂರಿ ಮಾಡಿದವರಿಗೆ ವಿಡಿಯೋ ಶೇರ್ ಮಾಡುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದ ಅಷ್ಟು ದಿನವೂ ವಿನಯ್ ಹಾಗೂ ಡ್ರೋನ್ ಪ್ರತಾಪ್ ಜಗಳ ಮಾಡುತ್ತಲೆ ಇದ್ದರು. ಬಿಗ್ ಬಾಸ್ ನಲ್ಲಿ ನೇರ ನುಡಿ ಮೂಲಕ ಗಮನ ಸೆಳೆದ ವಿನಯ್ ಗೌಡ ಈಗ ಫೇಕ್ ಸುದ್ದಿ ಪ್ರಮೋಟ್ ಮಾಡಿದವನಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ ಸೋಷಿಯಲ್ ಮೀಡಿಯಾ ಪೇಜ್ವೊಂದು ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಕೆಟ್ಟದಾಗಿ ಮಾತನಾಡಿದ್ದಾರೆ ಎಂದೇ ಬರೆಯಲಾಗಿತ್ತು. ಇತ್ತೀಚೆಗೆ ಇನ್ಸ್ಟಾಗ್ರಾಂ ಲೈವ್ಗೆ ವಿನಯ್ ಬಂದಿದ್ದರು. ಆಗ ಪ್ರತಾಪ್ ಕುರಿತು ಕೆಟ್ಟ ಮಾತುಗಳನ್ನಾಡಿದ್ದಾರೆ ಎಂದೇ ಉಲ್ಲೇಖಿಸಿದ್ದರು. ಅದಕ್ಕೆ ವಿನಯ್ ಈಗ ಫುಲ್ ಆಗಿದ್ದಾರೆ.
ಡ್ರೋನ್ ಪ್ರತಾಪ್ ಬಗ್ಗೆ ನಾನು ಏನೂ ಮಾತನಾಡಿಯೇ ಇಲ್ಲ. ಆದರೂ ಏನೇನೋ ಹಾಕುವುದು ಎಷ್ಟು ಸರಿ ಹೇಳಿ. ಸುದ್ದಿ ಇಲ್ವೇ ಇಲ್ಲ ಅಂತ ಆಗದೇ ಇರುವ ವಿಚಾರ ಹಾಕಿದ್ದು ತಪ್ಪು ಅಲ್ವಾ ಎಂದು ವಿನಯ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಪ್ರಶ್ನೆ ಕೇಳಿದ್ದಾರೆ. ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಕೂಡ ವಿನಯ್ ಮಾಡಿಕೊಂಡಿದ್ದಾರೆ.
ನನ್ನ ಸ್ನೇಹಿತರು, ನನ್ನ ಆತ್ಮೀಯರು, ನನ್ನ ಕಲ್ಟ್ ಅಭಿಮಾನಿಗಳು ಈ ಒಂದು ಫೇಕ್ ಪ್ರಮೋಟರ್ ವಿರುದ್ಧ ಹೋರಾಡಬೇಕಿದೆ. ಇಂತಹ ಪೇಕ್ ಪ್ರಮೋಟರ್ ವಿರುದ್ಧ ನಿಮ್ಮದೇ ರೀತಿಯಲ್ಲಿ ಉತ್ತರ ಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ವಿನಯ್ ಗೌಡ ಕೇಳಿಕೊಂಡಿದ್ದಾರೆ.