ಬೆಂಗಳೂರು: ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಸಮಾನ್ಯವಾಗಿ ಪತಿ- ಪತ್ನಿ ಸೇರಿದಂತೆ ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ. ಹಾಗೆಯೇ ಮನೆಯಿಂದ ಹೋಗುವಾಗ ಮನೆಯ ಕೀ ಶೂನಲ್ಲೋ, ಕಿಟಕಿಯಲ್ಲೋ, ಬಾಗಿಲ ಸಂಧಿಯಲ್ಲೋ ಇಟ್ಟು ಹೋಗೋದು ಕಾಮನ್. ನೀವು ಏನಾದರೂ ಇದೇ ತರ ಮಾಡುತ್ತಿದ್ದರೆ ಈ ಸ್ಟೋರಿಯನ್ನು ಮಿಸ್ ಮಾಡದೇ ಓದಿ.
ಬೆಂಗಳೂರಿನಲ್ಲಿ ಒಬ್ಬರು ದುಡಿದು ಇಡೀ ಕುಟುಂಬವನ್ನು ಸಾಕುವುದು ಕಷ್ಟ. ಹಾಗಾಗಿ ಬಹುತೇಕ ಮನೆಗಳಲ್ಲಿ ಪತಿ-ಪತ್ನಿ, ಮಕ್ಕಳು ಎಲ್ಲರು ಕೆಲಸಕ್ಕೆ ಹೋಗುತ್ತಾರೆ. ಅದರಲ್ಲೂ ಐಟಿ-ಬಿಟಿಗಳಲ್ಲಿ ಕೆಲಸ ಮಾಡುವ ಗಂಡ-ಹೆಂಡತಿಯಂತೂ ರಾತ್ರಿ ಹಗಲು ಅನ್ನದೇ ಶಿಫ್ಟ್ ಲೆಕ್ಕದಲ್ಲಿ ಕೆಲಸ ಮಾಡ್ತಾರೆ. ಕೆಲಸಕ್ಕೆ ಹೋಗುವಾಗ ಮನೆಯ ಕೀಯನ್ನು ಯಾರಿಗೆ ಕೊಡೋದು ಅಂತಾ ಮನೆಯ ಕಿಟಕಿ, ಶೂಗಳು, ಬಾಗಿಲ ಸಂಧಿಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ಕೀ ಇಟ್ಟು ಹೋಗ್ತಾರೆ. ಇದನ್ನೇ ಇದನ್ನೆ ಬಂಡವಾಳ ಮಾಡಿಕೊಂಡ ಖತರ್ನಾಕ್ ಮನೆಗಳ್ಳರು ಹಾಡಹಗಲೇ ರಾಜಾರೋಷವಾಗಿ ಮನೆಗೆ ಎಂಟ್ರಿ ಕೊಡುತ್ತಾರೆ.
ಇಂಥದ್ದೇ ಒಂದು ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ಮಾಸ್ಕ್ ಧರಿಸಿ ಒಳಗೆ ಮನೆಯೊಳಗೆ ಎಂಟ್ರಿ ಕೊಟ್ಟ ಕಳ್ಳ ಮುನಿಯಪ್ಪ ಮೊದ ಮೊದಲು ಅಪಾರ್ಟ್ಗಳಿಗೆ ವಿವಿಧ ಕೆಲಸದ ನೆಪದಲ್ಲಿ ಎಂಟ್ರಿಯಾಗ್ತಿದ್ದ. ಆಮೇಲೆ ಪ್ಲಾಟ್ ಮುಂದಿನ ಚಪ್ಪಲಿ ಸ್ಟ್ಯಾಂಡ್ನಲ್ಲಿದ್ದ ಶೂ ಮತ್ತು ಚಪ್ಪಲಿಗಳನ್ನು ಕದ್ದು ಎಸ್ಕೇಪ್ ಆಗ್ತಿದ್ದ. ಕದ್ದ ಶೂ ಗಳಲ್ಲಿ ಬಹುತೇಕ ಮನೆಯ ಕೀ ಸಿಗುತ್ತಿತ್ತಂತೆ. ಇದನ್ನೇ ಬಂಡವಾಳ ಮಾಡ್ಕೊಂಡ ಮನೆಗಳ್ಳ ಮುನಿಯಪ್ಪ, ಅಪಾರ್ಟ್ಮೆಂಟ್ಗಳು, ಬಾಗಿಲು ಹಾಕಿರೋ ಮನೆಗಳ ಮುಂದಿನ ಕಿಟಕಿ, ಬಾಗಿಲು, ಶೂಗಳನ್ನು ಚೆಕ್ ಮಾಡ್ತಾನೆ. ಅಲ್ಲಿ ಇಟ್ಟಿರುವ ಕೀ ತಗೊಂಡು ಯಾರಿಗೂ ಅನುಮಾನ ಬಾರದ ರೀತಿ ಒಳಗೆ ಎಂಟ್ರಿಯಾಗ್ತಾನೆ. ಮನೆಯಲ್ಲಿದ್ದ ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳು ಸೇರಿ ಎಲ್ಲವನ್ನು ದೋಚಿ ಎಸ್ಕೇಪ್ ಆಗ್ತಾನೆ. ಆದರೆ ಈಗ ಅವನ ನಸೀಬು ಕೆಟ್ಟಿತ್ತು ಅನ್ಸುತ್ತೆ. ಕಳ್ಳತನ ಪ್ರಕರಣದಲ್ಲಿ ಬೈಯಪ್ಪನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯಿಂದ 7 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ನೀವು ಏನಾದರೂ ಈ ರೀತಿ ಕೀ ಇಟ್ಟು ಹೋಗ್ತಿದ್ರೆ ಎಚ್ಚರ ವಹಿಸಿ.