ಬೆಂಗಳೂರು:– ಕನ್ನಡ ನಾಮಫಲಕ ಕಡ್ಡಾಯಕ್ಕೆ ಇಂದೇ ಡೆಡ್ಲೈನ್ ಆಗಿದ್ದು, ಬಹುತೇಕ ಕಡೆ ಚಿತ್ರಣ ಬದಲಾಗಿದೆ. ಅಲ್ಲದೇ ಇದೇ ವೇಳೆ ಸರ್ಕಾರಕ್ಕೆ ಕರವೇ ಖಡಕ್ ಎಚ್ಚರಿಕೆ ಕೊಟ್ಟಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚೆತ್ತಿರುವ ವ್ಯಾಪಾರಿಗಳು ಹಳೇ ನಾಮಫಲಕ ತೆಗೆದು ಹೊಸ ನಾಮಫಲಕ ಹಾಕಿದ್ದಾರೆ. ದೊಡ್ಡ ಅಕ್ಷರದಲ್ಲಿ ಕನ್ನಡ ನಾಮಫಲಕ ಹಾಕಿರುವುದು ಹಲವೆಡೆ ಕಂಡು ಬಂದಿದೆ. ಆದರೆ ಮತ್ತೊಂದಷ್ಟು ಕಡೆ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಆಡಳಿತ ಭಾಷೆಯಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ರಾಜಧಾನಿಯಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿದ್ವು. ಬೇರೆ ಬಾಷೆಯ ನಾಮಫಲಕಗಳ ವಿರುದ್ಧ ಧ್ವನಿ ಎತ್ತಿದ್ದರು. ಸರ್ಕಾರವೂ ಸಹ ಎಚ್ಚೆತ್ತುಕೊಂಡು ಫೆಬ್ರವರಿ 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು. ಅದರಂತೆ ಅಂಗಡಿಗಳ ಮುಂದೆ ಶೇಕಡಾ 60 ರಷ್ಟು ಕನ್ನಡ ಭಾಷೆಯಲ್ಲೇ ನಾಮಫಲಕ ಇರಬೇಕು. ಇಂದು ಸರ್ಕಾರದ ಡೆಡ್ಲೈನ್ ಮುಗಿಯುತ್ತೆ. ಬೆಂಗಳೂರಿನಲ್ಲಿ ಒಂದಷ್ಟು ಪ್ರಮುಖ ರಸ್ತೆಗಳ ಅಂಗಡಿ-ಮುಂಗಟ್ಟುಗಳ ನಾಮಫಲಕ ಬದಲಾಗಿಲ್ಲ. ಆದರೆ ಬೆಂಗಳೂರಿನ ಬಹುತೇಕ ಕಡೆ ನಾಮಫಲಕ ಬದಲಾಗಿದೆ.
ಬೆಂಗಳೂರಿನ ಅವೆನ್ಯೂ ರೋಡ್, ಚಿಕ್ಕಪೇಟೆಯಲ್ಲಿ ವ್ಯಾಪಾರಿಗಳು ಕನ್ನಡ ನಾಮಫಲಕ ಹಾಕಿದ್ದಾರೆ. ಈ ಹಿಂದೆ ಚಿಕ್ಕದಾಗಿದ್ದ ಕನ್ನಡ ಬೋರ್ಡ್ಗಳನ್ನು ಬದಲಾವಣೆ ಮಾಡಿ ಈಗ ದೊಡ್ಡ ದೊಡ್ಡ ಅಕ್ಷರಗಳಲ್ಲೇ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಕೆಲ ಅಂಗಡಿ-ಮುಂಗಟ್ಟುಗಳಲ್ಲಿ ಮಾತ್ರ ಚಿಕ್ಕದಾಗಿ ಕನ್ನಡ ಬರಹ ಹಾಕಲಾಗಿದೆ. ಕನ್ನಡ ನಮ್ಮ ಮಾತೃಭಾಷೆ, ಅದನ್ನ ಬಳಸಬೇಕು. ಬೇರೆ ಭಾಷೆಗಳಿಗೆ ಅವರವರ ರಾಜ್ಯದಲ್ಲಿ ಬೆಲೆ ಕೊಡ್ತಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಬೆಳಿಯ ಬೇಕು ಎಂದ ಕನ್ನಡಿಗರೊಬ್ಬರು ತಿಳಿಸಿದರು. ಇನ್ನು ಕನ್ನಡ ನಾಮಫಲಕ ಅಷ್ಟೇ ಅಲ್ಲ, ಕನ್ನಡದಲ್ಲೇ ವ್ಯವಹರಿಸಬೇಕು ಎಂದ ವ್ಯಾಪಾರಿಗಳು ಹೇಳಿದರು.