ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಅದಕ್ಕೆ ಕಾರಣ ಸಿಧು ಮೂಸೆವಾಲಾ ಅವರ ತಾಯಿ ಗರ್ಭಿಣಿ ಎಂಬ ವಿಚಾರ. ಹೌದು. ಸಿಧು ಮೂಸೆವಾಲಾ ಅವರ ಪೋಷಕರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಅವರು ಬರುವ ಮಾರ್ಚ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಮೂಲಕ ಬಲ್ಕೌರ್ ಸಿಂಗ್ 60ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಂದೆ-ತಾಯಿಗೆ ಸಿಧು ಮೂಸೆವಾಲಾ ಒಬ್ಬನೇ ಮಗನಾಗಿದ್ದರು.
ಏನಿದು ಮೂಸೆವಾಲಾ ಹತ್ಯೆ ಕೇಸ್?: 2022ರ ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹತ್ಯೆಗೂ ಹಿಂದಿನ ದಿನ ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿತ್ತು. ಸಿಧು ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಹಾಗೂ ಸ್ನೇಹಿತರು ಕೂಡಾ ದಾಳಿಯ ವೇಳೆ ಗಾಯಗೊಂಡಿದ್ದರು.
ಸಿಧು ಮೂಸೆವಾಲಾ ಹತ್ಯೆಯ ಹಿಂದೆ ಗ್ಯಾಂಗ್ಸ್ಟರ್ ಲಾರೆನಸ್ ಬಿಶ್ನೋಯಿ ಅವರ ತಂಡದ ಕೈವಾಡವಿದೆ ಎಂದು ಹೇಳಲಾಗಿತ್ತು. ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಗ್ಯಾಂಗ್ನ ಸದಸ್ಯರಾದ ಶಾರ್ಪ್ ಶೂಟರ್ ಅಂಕಿತ್, ಸಚಿನ್ ಭಿವಾನಿ ಎನ್ನುವ ಪ್ರಮುಖ ಆರೋಪಿಗಳನ್ನು ಮೊದಲು ಬಂಧಿಸಿದ್ದರು. ಆನಂತರ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸಿಧು ಸಾವಿನ ಪ್ರಕರಣವನ್ನು ಪಂಜಾಬ್ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದೆ. ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ಜಗ್ಗು ಭಗವಾನ್ ಪುರಿಯಾ ಸೇರಿದಂತೆ 32 ಆರೋಪಿಗಳ ವಿರುದ್ಧ ತಂಡವು ಆರೋಪಪಟ್ಟಿ ಸಲ್ಲಿಸಿತ್ತು.
ಮಾನಸದಲ್ಲಿ ಸಿಧು ಅವರ ಸ್ಮರಣಾರ್ಥ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು. ದಿವಂಗತ ಗಾಯಕನ ಅಭಿಮಾನಿಗಳು ಮತ್ತು ಬೆಂಬಲಿಗರು ಮೂಸಾ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅವರಿಗೆ ನ್ಯಾಯ ಕೋರಿ ಕ್ಯಾಂಡಲ್ ಮಾರ್ಚ್ನಲ್ಲಿ ಭಾಗವಹಿಸಿದರು. ಮೆರವಣಿಗೆಯಲ್ಲಿ ಸಿದ್ದು ಅವರ ತಾಯಿ ಕೂಡ ಪಾಲ್ಗೊಂಡಿದ್ದರು. ದಿವಂಗತ ಗಾಯಕನ ಸ್ಮರಣಾರ್ಥ ಜವಾಹರ್ ಕೆ ಗ್ರಾಮದ ಗುರುದ್ವಾರದಲ್ಲಿ ಪ್ರಾರ್ಥನೆಗಳು ನಡೆದವು.