ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಪೊಲೀಸರ ಜೊತೆ ಗಲಾಟೆ ಮಾಡಿಕೊಂಡಿದ್ದ ತೆಲುಗು ನಟಿ ಸೌಮ್ಯ ಜಾನು ವಿರುದ್ಧ ಹೈದರಾಬಾದ್ ನ ಬಂಜಾರ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುರ್ತು ಕಾರಣದಿಂದಾಗಿ ರಾಂಗ್ ರೂಟ್ ನಲ್ಲಿ ಬಂದೆ. ಪೊಲೀಸರು ನನ್ನನ್ನು ಕೆಟ್ಟದಾಗಿ ನಿಂದಿಸಿದರು ಎಂದು ನಟಿ ಹೇಳಿಕೆ ನೀಡಿದ್ದಾರೆ.
ತಾಯಿಗೆ ಔಷಧಿ ತರಬೇಕಿತ್ತು ಎನ್ನುವ ಕಾರಣಕ್ಕಾಗಿ ಸೌಮ್ಯ, ತಮ್ಮ ಕಾರನ್ನು ರಾಂಗ್ ರೂಟ್ ನಲ್ಲಿ ಚಲಾಯಿಸಿದ್ದಾರೆ. ಇವರ ಕಾರನ್ನು ತಡೆದ ಟ್ರಾಫಿಕ್ ಹೋಮ್ ಗಾರ್ಡ್ ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹೋಮ್ ಗಾರ್ಡ್ ಸಮವಸ್ತ್ರ ಹರಿದಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೌಮ್ಯ ಜಾನು ಕುಡಿದು ಕಾರು ಚಲಾಯಿಸುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ತನಗೆ ಕುಡಿಯುವ ಅಭ್ಯಾಸವಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಪೊಲೀಸ್ ತಮ್ಮೊಂದಿಗೆ ಅನುಚಿತ ವರ್ತನೆ ಮಾಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದು ಸೌಮ್ಯ ಹೇಳಿದ್ದಾರೆ. ಸೌಮ್ಯ ಕೂಡ ಹೋಮ್ ಗಾರ್ಡ್ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಸದ್ಯ ಬಂಜಾರ್ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.