ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್ʼನಲ್ಲಿ ಟಿ.ಎ.ಶರವಣ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಹೌದು… ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದಲ್ಲಿ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗುತ್ತಾರೆ, ಇದನ್ನು ನಿಲ್ಲಿಸಲು ರಾಜ್ಯ ಸರ್ಕಾರ ವಿಫಲವಾಗುತ್ತದೆ, ಹೀಗಾದ ಮೇಲೆ ಇವರೆಲ್ಲ ಹೇಗೆ ರಾಜ್ಯದ ಜನರ ರಕ್ಷಣೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಾಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ದೇಶ ವಿರೋಧಿಗಳು ಆಡಳಿತದಲ್ಲಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ ಯಾವಾಗ ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಆ ನಂತರ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬೆಂಬಲಿಗರ ಮೇಲೆ ಪೊಲೀಸರು ದೇಶ ದ್ರೋಹ ಪ್ರಕರಣವನ್ನು ಹಾಕಿ,ಅಖಂಡ ಭಾರತವನ್ನು ಒಡೆಯಲು ಯತ್ನಿಸುವ ಶಕ್ತಿಗಳನ್ನು ಪೊಲೀಸರು ಕೂಡಲೇ ಹತ್ತಿಕ್ಕಬೇಕು ಎಂದು ವಾಗ್ದಾಳಿ ನಡೆಸಿದರು.