ಒಂದು ಕಾಲದಲ್ಲಿ ತಂಡದ ಇಡೀ ಮಧ್ಯಮ ಕ್ರಮಾಂಕದ ಜೀವಾಳವಾಗಿದ್ದ ರಹಾನೆ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದು, ಪ್ರಸ್ತುತ ರಣಜಿ ಟ್ರೋಫಿಯಲ್ಲೂ ರಹಾನೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಪ್ರತಿಕೂಲ ಸಂದರ್ಭಗಳಲ್ಲಿ ಟೀಂ ಇಂಡಿಯಾ ಪರ ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದ ರಹಾನೆ, ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದ್ದಾರೆ. ಸದ್ಯದ ಅಜಿಂಕ್ಯ ರಹಾನೆ ಪ್ರದರ್ಶನ ನೋಡಿದರೆ ಭಾರತ ತಂಡದಲ್ಲಿ ಮಾತ್ರವಲ್ಲದೆ ಮುಂಬೈನ ರಣಜಿ ತಂಡದಲ್ಲೂ ಅವರನ್ನು ಉಳಿಸಿಕೊಳ್ಳುವುದು ಕಷ್ಟ ಎನಿಸುತ್ತಿದೆ.
ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪೋರ್ಟ್ ಆಫ್ ಸ್ಪೇನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕೊನೆಯ ಬಾರಿಗೆ ಆಡಿದ್ದ ರಹಾನೆ ಪ್ರಸ್ತುತ ರಣಜಿ ಟ್ರೋಫಿ ಆಡುತ್ತಿದ್ದಾರೆ. ರಹಾನೆ ಈ ಸೀಸನ್ನಲ್ಲಿ ಆಡಿರುವ ಒಟ್ಟು 10 ಇನ್ನಿಂಗ್ಸ್ಗಳಲ್ಲಿ ಕೇವಲ 115 ರನ್ ಕಲೆಹಾಕಿದ್ದಾರೆ. ಅದರಲ್ಲಿ ಮೂರು ಬಾರಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.
ಈ 10 ಇನ್ನಿಂಗ್ಸ್ಗಳಲ್ಲಿ ರಹಾನೆ ಅವರ ಸ್ಕೋರ್ಗಳು ಕ್ರಮವಾಗಿ 0, 0, 16, 8, 9, 1, 56*, 22, 3 ಮತ್ತು 0. ರಹಾನೆ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿದ್ದು, ತಂಡವು ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದೆ
ಅಜಿಂಕ್ಯ ರಹಾನೆ ಭಾರತದ ಪರ 85 ಟೆಸ್ಟ್ ಪಂದ್ಯಗಳಲ್ಲಿ 49.50 ಸರಾಸರಿಯಲ್ಲಿ 12 ಶತಕ ಮತ್ತು 26 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರು ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನು ಆಡಬೇಕೆಂದು ಹೇಳಿದ್ದರು. ಅದಕ್ಕಾಗಿ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿದ್ದರು. ಆದರೆ ಇದು ಇದುವರೆಗೆ ಸಾಧ್ಯವಾಗಿಲ್ಲ.