ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಸಿದ ಪದವೊಂದು ಅವರನ್ನು ಸಾಕಷ್ಟು ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ. ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವೆ ನಡೆಯುತ್ತಿರುವ ವಾಕ್ ಸಮರ ದಿನದಿಂದ ದಿನಕ್ಕೆ ನಾನಾ ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ದರ್ಶನ್ ವಿರುದ್ಧ ಮಹಿಳೆಯೊಬ್ಬರು ಖಾಸಗಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ 37ನೇ ಎಸಿಎಂಎಂ ಕೋರ್ಟ್ನಲ್ಲಿ ರೇಣುಕಮ್ಮ ಎಂಬುವವರು ದರ್ಶನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಅಗೌರವವಾಗಿ ದರ್ಶನ್ ಮಾತನಾಡಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ರೇಣುಕಮ್ಮ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 295(ಎ) (ಮಹಿಳೆಯರಿಗೆ ಅವಮಾನ), 509 (ಮಹಿಳೆಯ ಮಾನಕ್ಕೆ ಅಡ್ಡಿ ಮಾಡುವ ಉದ್ದೇಶದಿಂದ ಬಳಸಿದ ಭಾಷೆ), 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 504 (ಶಾಂತಿ ಭಂಗಕ್ಕೆ ಪ್ರಚೋದನೆ) ಅಡಿ ಕೇಸ್ ದಾಖಲಿಸುವಂತೆ ರೇಣುಕಮ್ಮ ಖಾಸಗಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸದ ಕಾರಣ ರೇಣುಕಮ್ಮ ಈಗ ಕೋರ್ಟ್ ಮೊರೆ ಹೋಗಿ ದೂರು ಸ್ವೀಕರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
37ನೇ ಎಸಿಎಂಎಂ ಕೋರ್ಟ್ನಲ್ಲಿ ರೇಣುಕಮ್ಮ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು. ರೇಣುಕಮ್ಮ is ಪರ ವಕೀಲ ರಂಗನಾಥ್ ವಾದ ಮಂಡಿಸಿದರು. ಕೋರ್ಟ್ ಕೆಲ ದಾಖಲೆಗಳನ್ನ ಒದಗಿಸುವಂತೆ ಸೂಚಿಸಿ ವಿಚಾರಣೆ ಮಾರ್ಚ್ 1ಕ್ಕೆ ಮುಂದೂಡಲಾಗಿದೆ.