ನವದೆಹಲಿ: ಸಂಸದ ರಾಹುಲ್ ಗಾಂಧಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಶಾಕ್ ನೀಡಿದ್ದು ವಯನಾಡಿನಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಕೇರಳದಲ್ಲಿ ಲೋಕಸಭೆ ಚುನಾವಣೆಗೆ ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿಪಿಐ ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಮಟ್ಟದಲ್ಲಿ INDIA ಮೈತ್ರಿಕೂಟದ ಭಾಗವಾಗಿರುವ ಸಿಪಿಐ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್ ಮತ್ತು ವಯನಾಡಿನಿಂದ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ. ವಿಎಸ್ ಸುನೀಲ್ ಕುಮಾರ್ ತ್ರಿಶೂರ್ ಮತ್ತು ಅರುಣ್ ಕುಮಾರ್ ಮಾವೇಲಿಕರದಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ನ ಶಶಿ ತರೂರ್ ಅವರು ತಿರುವನಂತಪುರಂನ ಹಾಲಿ ಸಂಸದರಾಗಿದ್ದು, ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಿದರೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ಅವರನ್ನು ಎದುರಿಸಬೇಕಾಗುತ್ತದೆ.
ಸದ್ಯಕ್ಕೆ ರಾಹುಲ್ ಗಾಂಧಿ ಕಣ್ಣು ದಕ್ಷಿಣ ಭಾರತದ ರಾಜ್ಯಗಳ ಮೇಲೆಯೇ ಇದೆ. ಸದ್ಯಕ್ಕೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತವಿದೆ. ಹೀಗಾಗಿ ಈ ಎರಡು ರಾಜ್ಯಗಳ ಪೈಕಿ ಒಂದು ರಾಜ್ಯದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.
ರಾಹುಲ್ ಗಾಂಧಿ ಎಂದಿನಂತೆ ಎರಡು ಕಡೆ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದ ಒಂದು ಸ್ಥಾನ ಮತ್ತು ಕರ್ನಾಟಕ ಅಥವಾ ತೆಲಂಗಾಣದಿಂದ ಸ್ಪರ್ಧಿಸುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಕೇರಳದ ವಯನಾಡಿನಲ್ಲಿ ಕಳೆದ ಬಾರಿ ಭರ್ಜರಿ ಅಂತರದ ಗೆಲುವು ಸಾಧಿಸಿದ್ದರೂ ಈ ಬಾರಿ ವಯನಾಡಿನಿಂದ ಹೊರಬರುವ ನಿರ್ಧಾರ ನಡೆಸಿದ್ದಾರೆ.