ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸಲಿದ್ದು, ಸತತ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರದ ಮೂರನೇ ಅವಧಿ ಜೂನ್ನಿಂದ ಕಾರ್ಯಾರಂಭ ಆಗಲಿದೆ ಎಂದು ಹೇಳಿರುವ ಪ್ರಧಾನಿ ಮೋದಿ, ನಮ್ಮ ಸರ್ಕಾರದ ವೇಗ ಹಾಗೂ ಅಭಿವೃದ್ದಿ ಕಾರ್ಯಗಳ ಗಾತ್ರ ಜನರಲ್ಲಿ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ಜನತೆ ಹೊಸ ಭಾರತವನ್ನು ನೋಡುತ್ತಿದ್ದಾರೆ ಎಂದು ಹೇಳಿದ ಪ್ರಧಾನಿ ಮೋದಿ, ರೈಲ್ವೆ ಇಲಾಖೆಯಲ್ಲಂತೂ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ, ವಂದೇ ಭಾರತ್ ರೈಲು ಸೇರಿದಂತೆ ಇಲಾಖೆಯೇ ರೂಪಾಂತರಗೊಂಡಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಫೆಬ್ರವರಿ ಆರಂಭದಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಅಷ್ಟೇ ಅಲ್ಲ, ಎನ್ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ. ಜೊತೆಯಲ್ಲೇ ತಮ್ಮ ಮುಂದಿನ ಅವಧಿಯಲ್ಲಿ ದೇಶವು ಅತಿ ದೊಡ್ಡ ನಿರ್ಣಯಗಳಿಗೆ ಸಾಕ್ಷಿಯಾಗಲಿದೆ ಎಂದು ಹೇಳಿದ ಪ್ರಧಾನಿ ಮೋದಿ, ಮುಂದಿನ 1 ಸಾವಿರ ವರ್ಷಕ್ಕೆ ಭದ್ರ ಬುನಾದಿ ಹಾಕುವ ನಿರ್ಣಯಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದರು.