ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಕಮ್ ಐಎಎಸ್ ಅಧಿಕಾರಿ ಕೆ.ಶಿವರಾಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಳೆ ಅಂದರೆ ಮಾರ್ಚ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಶಿವರಾಮ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಸಂಜೆ 4:18ಕ್ಕೆ ಕೆ.ಶಿವರಾಮ್ ನಿಧನರಾಗಿದ್ದು, ಶುಕ್ರವಾರ (ಮಾ.1) ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಅಭಿಮಾನಿಗಳಿಗೆ, ಆಪ್ತರಿಗೆ ಅಂತಿಮ ದರ್ಶನ ಅವಕಾಶವಿದೆ ಎಂದು ಅಳಿಯ ಪ್ರದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಭಾರಿಗೆ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಶಿವರಾಮ್ ಆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನಿನ್ನೆಯಷ್ಟೇ ಶಿವರಾಮ್ ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಳಿಯ ಪ್ರದೀಪ್ ನಿನ್ನೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಅವರ ಕಂಡೀಷನ್ ಕ್ರಿಟಿಕಲ್ ಆಗಿದೆ ಎಂದಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕೆಲಸ ಮಾಡಿ ಎಲ್ಲಾ ಕಡೆಯೂ ಸೈ ಎನಿಸಿಕೊಂಡಿದ್ದರು.
2013ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಛಲವಾದಿ ಮಹಸಭಾದ ಅಧ್ಯಕ್ಷರಾಗಿದ್ದರು. ಕೆ ಶಿವರಾಮ್ ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.