ನವದೆಹಲಿ: ಸತು ದೇಹವನ್ನು ಸದೃಢವಾಗಿಸುತ್ತದೆ ಎಂದು ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು ಮತ್ತು 37 ಅಯಸ್ಕಾಂತಗಳನ್ನು ವೈದ್ಯರು ಹೊರತೆಗೆದಿದ್ದಾರೆ. ದೆಹಲಿಯ 26 ವರ್ಷದ ರೋಗಿಯೊಬ್ಬರು 20 ದಿನಗಳಿಗೂ ಹೆಚ್ಚು ಕಾಲ ಪದೇ ಪದೇ ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ರೋಗಿ ಏನನ್ನು ತಿನ್ನದೇ ಇದ್ದಾಗ ಅನುಮಾನಗೊಂಡು ವೈದ್ಯರು, ಎಕ್ಸ್ ರೇ ಮಾಡಿ ನೋಡಿದಾಗ ನಾಣ್ಯಗಳು ಹಾಗೂ ಅಯಸ್ಕಾಂತಗಳು ಕರುಳಿನಲ್ಲಿ ಇರುವುದು ಬೆಳಕಿಗೆ ಬಂದಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರಗೆ ತೆಗೆದಿದ್ದಾರೆ. ವ್ಯಕ್ತಿಯ ಹೊಟ್ಟೆಯಿಂದ 1, 2, 5 ರೂ.ಗಳ ನಾಣ್ಯಗಳು ಮತ್ತು ಹೃದಯ, ಗೋಳ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರದ ಅಯಸ್ಕಾಂತಗಳನ್ನು ಹೊರತೆಗೆಯಲಾಗಿದೆ.
ಈ ಹಿಂದೆಯೂ ರೋಗಿಗಳು ಅಯಸ್ಕಾಂತ ಹಾಗೂ ನಾಣ್ಯಗಳನ್ನು ಸೇವಿಸಿದ ಸಾಕಷ್ಟು ಉದಾಹರಣೆಗಳಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ.ತರುಣ್ ಮಿತ್ತಲ್ ಹೇಳಿದ್ದಾರೆ. ನಾಣ್ಯವನ್ನು ನುಂಗಿದ ವ್ಯಕ್ತಿಯು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ದೇಹ ಗಟ್ಟಿಯಾಗುತ್ತದೆ ಎಂದು ನಾಣ್ಯಗಳು ಮತ್ತು ಅಯಸ್ಕಾಂತಗಳನ್ನು ನುಂಗಿದ್ದಾನೆ ಎಂದು ತಿಳಿದು ಬಂದಿದೆ.