ಬೆಂಗಳೂರು: ನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಮಹಿಳೆಯರು ಖಾಲಿ ಕೊಡಗಳೊಂದಿಗೆ ನೀರು ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ಯಶವಂತಪುರದ ಪುನೀತ್ ರಾಜ್ಕುಮಾರ್ ಲೇಔಟ್ನಲ್ಲಿ ಸಾಮಾನ್ಯವಾಗಿದೆ.
ಇಲ್ಲಿ ನೀರು ಇಲ್ಲದ ಕಾರಣ ಬಾಡಿಗೆದಾರರು ಮನೆ ಖಾಲಿಮಾಡಿಕೊಂಡು ಹೋಗುತ್ತಿದ್ದಾರಂತೆ.
ಇದರಿಂದ ಲೇಔಟ್ ತುಂಬಾ ಟು ಲೆಟ್ (TO LET) ಬೋರ್ಡ್ಗಳೇ ಕಣ್ಣಿಗೆ ಬೀಳುತ್ತಿವೆ. ಮೊದಲು 400 ರಿಂದ 500 ರೂಪಾಯಿಗೆ ಒಂದು ಟ್ಯಾಂಕರ್ ನೀರು ಕೊಡುತ್ತಿದ್ದ ಟ್ಯಾಂಕರ್ನವರು ಈಗ 1000 ದಿಂದ 1200 ರೂಪಾಯಿ ಕೇಳುತ್ತಿದ್ದಾರೆ. ಬೋರ್ ವೆಲ್ಗಳು ಬತ್ತಿ ಹೋಗಿವೆ. ಸರಿಯಾಗಿ ಕುಡಿಯಲು ನೀರು ಬರುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ದೊಡ್ಡ ಬಿದರಕಲ್ಲಿನ ಪುನೀತ್ ರಾಜ್ಕುಮಾರ್ ಬಡಾವಣೆ ನಿವಾಸಿಗಳಿಗೆ ಕುಡಿಯಲು ಕಾವೇರಿ ನೀರಿಲ್ಲ. ಬೋರ್ವೆಲ್ ನೀರಿನಿಂದಲೇ ತಮ್ಮ ದಾಹ ತೀರಿಸಿಕೊಳ್ಳಬೇಕು ಆದರೆ ಆ ಬೋರ್ವೆಲ್ಗಳಲ್ಲೂ ನೀರು ಬತ್ತಿ ಹೋಗಿದೆಯಂತೆ. ಬಿಬಿಎಂಪಿ ಈ ಏರಿಯಾಗೆ ಟ್ಯಾಂಕರ್ಗಳ ಮೂಲಕ ಉಚಿತವಾಗಿ ಪ್ರತಿದಿನ ನೀರು ಪೂರೈಕೆ ಮಾಡುತ್ತಿದೆ. ಆದರೆ ಅದು ಕೂಡ ನಿಂತು ತುಂಬಾ ತಿಂಗಳುಗಳೇ ಕಳೆದಿವೆ.
ಸಿಎಂ ಸಿದ್ದರಾಮಯ್ಯ ಅವರ ಜನತಾದರ್ಶನದಲ್ಲಿ ಮನವಿ ನೀಡಿದರೂ ಕುಡಿಯಲು ಮಾತ್ರ ನೀರಿಲ್ಲವಂತೆ. ಖುದ್ದಾಗಿ ಸಿಎಂ ಕುಡಿಯಲು ನೀರು ಕೊಡಲು ಹೇಳಿದ್ದರೂ ಅಧಿಕಾರಿಗಳು ಮಾತ್ರ ಪೂರೈಕೆ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.