ಹೈದರಾಬಾದ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಒಂದು ವೇಳೆ ನೀವು ಬಿಜೆಪಿಗೆ ಮತ ನೀಡದಿದ್ದರೆ ನೀವು ನರಕಕ್ಕೆ ಹೋಗ್ತೀರಿ ಎಂದು ನಿಜಾಮಾಬಾದ್ ಸಂಸದ ಡಿ.ಅರವಿಂದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದರ ಹೇಳಿಕೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಡಿಯೋದಲ್ಲೇನಿದೆ..?: ಸಾರ್ವಜನಿಕರಿಗೆ ಆಹಾರ ನೀಡುವ ಕೈಯನ್ನು ಕಚ್ಚಬೇಡಿ. ನೀವು ಸ್ವರ್ಗಕ್ಕೆ ಹೋಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭ ಪಡೆದು ಬಿಜೆಪಿಯನ್ನು ಬೆಂಬಲಿಸದಿದ್ದರೆ ಜನರು ನರಕಕ್ಕೆ ಹೋಗುತ್ತಾರೆ ಎಂದಿದ್ದಾರೆ. ಇದೇ ವೇಳೆ ತಮ್ಮ ಪಕ್ಷವಾದ ಬಿಜೆಪಿಯನ್ನು ತೋರಿಸಿ, ಸ್ವರ್ಗಕ್ಕೆ ಹೋಗಬೇಕಾದರೆ ದೇಶ ಸೇವೆ ಮಾಡುವವರನ್ನು ಬೆಂಬಲಿಸಿ ಮತ ನೀಡಬೇಕು ಎಂದು ಸಭೆಗೆ ಮನವಿ ಮಾಡಿದರು. ಇಲ್ಲದಿದ್ದರೆ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ.
ನಿಮಗೆ ಉಚಿತ ಆಹಾರ, ಉಚಿತ ಗ್ಯಾಸ್, ಉತ್ತಮ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಮದುವೆಗೆ ಹಣವನ್ನು ಕಳುಹಿಸುತ್ತಿದ್ದಾರೆ. ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಿದ್ದಾರೆ. ತ್ರಿವಳಿ ತಲಾಖ್ ರದ್ದುಪಡಿಸಿ ನಿಮ್ಮ ಆತ್ಮಗೌರವವನ್ನು ಖಾತ್ರಿಪಡಿಸಿದೆ ಎಂದರು. ಹಿಂದೂಗಳೆಲ್ಲ ಒಗ್ಗೂಡಿ ಬಿಜೆಪಿಗೆ ಮತ ಹಾಕಬೇಕು. ಹಿಂದೂ ಸಮಾಜದಲ್ಲಿದ್ದು ಬಿಜೆಪಿಯನ್ನು ಬೆಂಬಲಿಸದವರೇ ನಿಜವಾದ ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಬಿಜೆಪಿ ಸಂಸದರ ವೀಡಿಯೊ ವೈರಲ್ ಆದ ಬಳಿಕ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.