ಬೆಂಗಳೂರು:- ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಎಂದು ಹೇಳಲಾಗಿದೆ.
ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸದ್ಯ ಈ ಘಟನೆ ಸಂಬಂಧ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದೆ. ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೂ ಈಗಿನ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಈ ಹಿಂದೆ ನಡೆದಿರುವ ಸ್ಫೋಟಗಳು ಹಾಗೂ ರಾಮೇಶ್ವರಂ ಕೆಫೆ ಸ್ಫೋಟ ನಡುವಿನ ಸಾಮ್ಯತೆ ಬಗ್ಗೆ ಪರಿಶೀಲನೆ ನಡೆಸಿದ್ದು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಳಸಿದ್ದ ಸ್ಫೋಟಕ ಸಾಮಗ್ರಿಯನ್ನೇ ರಾಮೇಶ್ವರಂ ಕೆಫೆ ಸ್ಫೋಟದಲ್ಲೂ ಬಳಕೆ ಮಾಡಲಾಗಿದೆ.
ಎರಡೂ ಕಡೆ ನಡೆದ ಸ್ಫೋಟದ ವೇಳೆ ಹೊರಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಈ ಎರಡೂ ಸ್ಫೋಟಗಳಲ್ಲೂ ಒಂದೇ ಮಾದರಿಯ ವಸ್ತುಗಳ ಬಳಕೆ ಮಾಡಲಾಗಿದೆ. ಎರಡೂ ಕಡೆ ಬ್ಯಾಟರಿ, ಡಿಟೊನೇಟರ್ಗಳು, ನಟ್ಟು, ಬೋಲ್ಟ್ ಬಳಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಚುರುಕಾಗಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಮತ್ತು ಸಹಚರರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸದ್ಯ ಶಾರಿಕ್ ಌಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇನ್ನು ನಿನ್ನೆಯಿಂದ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಐಎಸ್ಡಿ, ಎನ್ಐಎ ಬಳಿಕ ರಾಮೇಶ್ವರಂ ಕೆಫೆಗೆ ತಡರಾತ್ರಿ ಕೇಂದ್ರ ಗುಪ್ತಚರ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಯಾಂಪಲ್ಸ್ ಸಂಗ್ರಹ ಮಾಡಿದೆ. ಪ್ರಕರಣದ ಗಂಭೀರತೆ ಅರಿತು ಕೇಂದ್ರ ತನಿಖಾ ತಂಡಗಳು ಭೇಟಿ ನೀಡಿವೆ. ಎಫ್ಎಸ್ಎಲ್ ತಂಡ, ಸೋಕೊ ಟೀಂ, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಸ್ಯಾಂಪಲ್ಸ್ ಸಂಗ್ರಹ ಮಾಡುತ್ತಿದೆ.