ಬೆಂಗಳೂರು ಗ್ರಾಮಾಂತರ:- ಡ್ರ್ಯಾಗರ್ನಿಂದ ಇರಿದು ರೌಡಿ ಶೀಟರ್ ಕೊಲೆ ನಡೆದಿರುವ ಘಟನೆ ಜರುಗಿದೆ. ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜ ಹತ್ಯೆಯಾದ ರೌಡಿಶೀಟರ್.
ಇದೇ ತಿಂಗಳ 23 ನೇ ತಾರೀಖಿನ ರಾತ್ರಿ ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ತನ್ನ ಗ್ಯಾಂಗ್ ಜೊತೆ ಮಾರಕಾಸ್ತ್ರಗಳೊಂದಿಗೆ ಎಂಟ್ರಿ ಕೊಟ್ಟಿದ್ದ ಮೆಂಟಲ್ ಮಂಜ, ಗಲಾಟೆ ಪ್ರಕರಣವೊಂದರ ಸಾಕ್ಷಿಯಾಗಿದ್ದ ಟ್ಯಾಟೂ ವಿಜಿಗೆ ಸಾಕ್ಷಿ ಹೇಳುವಂತೆ ವಾರ್ನ್ ಮಾಡಿದ್ದ. ಇದಕ್ಕೆ ಒಪ್ಪದೆ ಇದ್ದಾಗ ಇಡೀ ಏರಿಯಾದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದ. ಅಷ್ಟೊತ್ತಿಗೆ ಸ್ಥಳೀಯ ನಿವಾಸಿಗಳು ಅದರಲ್ಲೂ ಮಹಿಳೆಯರು ವಿಜಿ ನೆರವಿಗೆ ಧಾವಿಸಿ ಬಚಾವ್ ಮಾಡಿದ್ದಾರೆ. ಮೂಗು ಬಾಯಲ್ಲಿ ರಕ್ತ ಸುರಿಯುತ್ತಿದ್ದರಿಂದ ಆಸ್ಪತ್ರೆಗೆ ಕರೆದೊಯ್ದಿದ್ದರು.
ಇನ್ನು ಕುಡಿದ ನಶೆಯಲ್ಲಿದ್ದ ಮೆಂಟಲ್ ಮಂಜ, ಅಷ್ಟಕ್ಕೆ ಸುಮ್ಮನಾಗದೇ ಪುನಃ ಟ್ಯಾಟೂ ವಿಜಿ ಮನೆ ಬಳಿ ಟೂಲ್ಸ್ ಸಮೇತ ಹುಡುಗರನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟೊತ್ತಿಗೆ ಟ್ಯಾಟೂ ವಿಜಿ ಮೇಲಿನ ಹಲ್ಲೆ ವಿಚಾರ ತಿಳಿದು ಆತನ ಸ್ನೇಹಿತರು ಮನೆ ಬಳಿ ಬಂದಿದ್ದಾರೆ. ಈ ವೇಳೆ ಎರಡು ಟೀಮ್ ನಡುವೆ ಮಾರಾಮಾರಿಯಾಗಿದೆ. ಮೆಂಟಲ್ ಮಂಜನಿಗೆ ಎದೆ, ಬೆನ್ನು ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಿತ್ತಿದ್ದಂತೆ ಉಳಿದವರು ಎಸ್ಕೇಪ್ ಆಗಿದ್ದಾರೆ. ಟ್ಯಾಟೂ ಹಾಕುವುದರ ಜೊತೆಗೆ ನಾಯಿ ಸಾಕಾಣಿಕೆ ಮಾಡುತ್ತಿದ್ದ ವಿಜಿ, ನೊಂದವರಿಗೆ ನೆರವಾಗುತ್ತಿದ್ದ, ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ. ಆದ್ರೆ, ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಇತನನ್ನು ಕೊಲ್ಲಲು ಬಂದ ಮೆಂಟಲ್ ಮಂಜ, ಇದೀಗ ತಾನೇ ಹತ್ಯೆಯಾಗಿ ಹೋಗಿದ್ದಾನೆ
ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜನನ್ನ ಕೊಲೆ ಮಾಡಿದ್ದ ಆರೋಪಿಗಳನ್ನ ಆನೇಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಪಟ್ಟಣದ ನಿವಾಸಿ ಮೆಂಟಲ್ ಮಂಜ ಕೊಲೆಯಾದ ರೌಡಿ ಶೀಟರ್ ಆಗಿದ್ದಾನೆ. ಮಧು, ಕಿರಣ್, ಗೌತಮ್, ಅಕ್ಷಯ್ ಶಶಿ ಮತ್ತು ವಿಜಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಘಟನೆ ಸಂಬಂಧ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೆಂಟಲ್ ಮಂಜ ಹಾಗೂ ಸಹಚರ ಸಜ್ಜಾದ್, ಕಳೆದೊಂದು ವರ್ಷದ ಹಿಂದೆ ಪಟ್ಟಣದ ಫಾತಿಮಾ ಎಂಬ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಇವೊಂದು ಪ್ರಕರಣಕ್ಕೆ ಟ್ಯಾಟೂ ವಿಜಿ ವಿಟ್ನೆಸ್ ಆಗಿದ್ದ.
ಇದೇ ಕಾರಣಕ್ಕೆ ಎರಡು ಗ್ಯಾಂಗ್ಗಳ ನಡುವೆ ಗಲಾಟೆ ನಡೆದು ರೌಡಿ ಶೀಟರ್ ಮಂಜನ ಕೊಲೆಯಾಗಿದೆ.
ಪ್ರಕರಣದ ಆರೋಪಿಗಳಾದ ಮಧು, ಕಿರಣ್, ಗೌತಮ್, ಅಕ್ಷಯ್ ಶಶಿ ಮತ್ತು ವಿಜಿ ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ