ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿತ್ತು. ಸಭೆಯಲ್ಲಿ 18 ರಾಜ್ಯಗಳ 350 ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪುರೇಷೆ ನೀಡಲಾಗಿದೆ.
ಲೋಕಸಭೆಗೆ ಬಿಜೆಪಿಯ ಮೊದಲ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಬಿಜೆಪಿ ಮೊದಲ ಲಿಸ್ಟ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಸಂಜೆ 6 ಗಂಟೆಗೆ ಬಿಜೆಪಿ ಸುದ್ದಿಗೋಷ್ಠಿ ಕರೆದಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.
ಚುನಾವಣೆ ಘೋಷಣೆಗೆ ದಿನ ಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ಕಾರ್ಯರೂಪ ನಡೆ ನಡೆಸುತ್ತಿವೆ. ಬಿಜೆಪಿ ಕೂಡ ಅಭ್ಯರ್ಥಿಗಳ ಪಟ್ಟಿ ಕುರಿತಂತೆ ಚಿಂತನಾ ಸಭೆ ನಡೆಸಿದೆ. ಸಭೆಯಲ್ಲಿ ಉತ್ತರ ಪ್ರದೇಶ, ಎಂಪಿ, ಉತ್ತರಾಖಂಡ, ಗುಜರಾತ್, ಅಸ್ಸಾಂ, ತೆಲಂಗಾಣ, ಕೇರಳ ಮತ್ತು ಇತರ ರಾಜ್ಯಗಳ ಟಿಕೆಟ್ ಬಗ್ಗೆ ಚರ್ಚಿಸಲಾಗಿದೆ.
ಈ ಸಲ ಬಿಜೆಪಿ ಅಭ್ಯರ್ಥಿಗಳ ವಿಚಾರದಲ್ಲಿ ಹೊಸ ತಂತ್ರ ಅನುಸರಿಸಿದೆ. ಜನರ ಅಭಿಪ್ರಾಯದ ಜೊತೆಗೆ ಆಂತರಿಕ ಮೌಲ್ಯಮಾಪನ, ಉನ್ನತ ಮಟ್ಟದ ಚರ್ಚೆ ನಡೆಸಿರುವ ಬಿಜೆಪಿ, ಬಹು ಹಂತಗಳ ಸಮಗ್ರ ಪ್ರಕ್ರಿಯೆಯನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ಅನುಸರಿಸಿದೆ. ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ, 18 ರಾಜ್ಯಗಳ ಸುಮಾರು 350 ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಇಂದು ಬಿಜೆಪಿಯ ಮೊದಲ 130 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.