ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೊತೆಗೆ ತಮ್ಮ ಸರಳತೆಯ ಮೂಲಕವೂ ಜನಗಳ ಮನಸ್ಸು ಗೆದ್ದಿದ್ದಾರೆ. ರಜನಿ ರಾಜಕೀಯ ಎಂಟ್ರಿಯ ಬಗ್ಗೆ ಅನೌನ್ಸ್ ಮಾಡಿದ್ದರು ಅನಾರೋಗ್ಯದ ಕಾರಣದಿಂದ ರಾಜಕೀಯದಿಂದ ದೂರ ಉಳಿದಿದ್ದಾರೆ. ಇದೀಗ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿಕೊಡದೆಯೇ ಬಡವರ ಸೇವೆಗೆ ಮುಂದಾಗಿದ್ದಾರೆ.
ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಬಡವರಿಗಾಗಿ ಚೆನ್ನೈನಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸಲು ಹೊರಟಿದ್ದಾರೆ. ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಬೃಹತ್ ಆಸ್ಪತ್ರೆ ಕಟ್ಟಿಸಲು ಮುಂದಾಗಿದ್ದಾರೆ. ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರಿನಲ್ಲಿ ಸುಮಾರು 12 ಎಕರೆ ಜಾಗವನ್ನು ಖರೀದಿ ಮಾಡಿದ್ದು ಅಲ್ಲಿ ಆಸ್ಪತ್ರೆ ಕಟ್ಟಿಸಲು ಸೂಪರ್ ಸ್ಟಾರ್ ಮುಂದಾಗಿದ್ದಾರೆ.
ಚೆನ್ನೈ ಹಾಗೂ ತಿರುಪ್ಪುರೂರು ನಡುವೆ ಸುಮಾರು 45 ಕಿ.ಮೀ ಅಂತರವಿದ್ದು ಇಲ್ಲಿ ಜಮೀನು ಖರೀದಿಸಿದ್ದಾರೆ. ಈತ್ತೀಚೆಗೆ ಜಮೀನನ್ನು ನೋಂದಣಿ ಕೂಡ ಮಾಡಿಸಿದ್ದರು. ಅಲ್ಲಿಯೇ ಆಸ್ಪತ್ರೆ ಕಟ್ಟುತ್ತಾರೆ ಎಂದು ಹೇಳಲಾಗುತ್ತಿದೆ. ಜಾಗದ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬರಲಿಲ್ಲವಾದರೂ ಆಸ್ಪತ್ರೆ ಕಟ್ಟುವ ಉದ್ದೇಶಕ್ಕಾಗಿಯೇ ಈ ಜಮೀನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಗಳು ಮುಗಿದಿದ್ದು ಯೋಜನೆ ಸಹ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರಂತೆ. ಈ ಆಸ್ಪತ್ರೆಯು ಬಡವರಿಗಾಗಿ ನಿರ್ಮಿಸಲಾಗುತ್ತಿದ್ದು, ಉಚಿತವಾಗಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ ಎನ್ನಲಾಗುತ್ತಿದೆ.