ಇಸ್ಲಾಮಾಬಾದ್: ಸದ್ಯ ಕ್ರಿಕೆಟ್ ಲೋಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ (shreyas Iyer And Ishan Kishan) ಸುದ್ದಿಯಲ್ಲಿದ್ದಾರೆ. ಬಿಸಿಸಿಐ ಇತ್ತೀಚೆಗೆ ಪ್ರಕಟಿಸಿದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಗೇಟ್ಪಾಸ್ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಗುತ್ತಿಗೆ ಪಟ್ಟಿ ಪ್ರಕಟಿಸಿದ ನಂತರ ಬಿಸಿಸಿಐ ತೆಗೆದುಕೊಂಡ ನಿರ್ಧಾರದ ಬಗ್ಗೆ ಪರ ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.
ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಬಿಸಿಸಿಐ ಬೆಂಬಲಿಸಿ ಮಾತನಾಡಿದ್ದಾರೆ. ಪಾಕಿಸ್ತಾನದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕ್ರಿಕೆಟ್ ಮಂಡಳಿ ಆದೇಶಗಳನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಆಟಗಾರರನ್ನು ಶಿಕ್ಷಿಸಲು ಇಂತಹ ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಶಾನ್ ಕಿಶನ್ ಮತ್ತು ಅಯ್ಯರ್ ಅವರನ್ನು ಕೇಂದ್ರ ಒಪ್ಪಂದದಿಂದ ಬಿಸಿಸಿಐ (BCCI) ಕೈಬಿಟ್ಟ ನಿರ್ಧಾರ ಸರಿಯಾಗಿದೆ. ಯಾವೊಬ್ಬ ಆಟಗಾರನೂ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಲು ಕಾರಣವಾದ ಆಟಕ್ಕೆ ಬೆಲೆ ಕೊಡದೇ ಇದ್ದರೆ, ಅದು ಇತರರಿಗೆ ಏನು ಸಂದೇಶ ನೀಡುತ್ತದೆ ಹೇಳಿ? ಮುಂದೆ ಆಗುವ ದೊಡ್ಡ ಹಾನಿಯನ್ನು ತಡೆಯಲು ಬಿಸಿಸಿಐ ಈಗಲೇ ಕ್ರಮ ತೆಗೆದುಕೊಂಡಿದ್ದು ಉತ್ತಮ. ಇಲ್ಲದಿದ್ದರೆ ಭವಿಷ್ಯದ ಆಟಗಾರರೂ ಈ ರೀತಿ ಮಾಡೋದಕ್ಕೆ ಹಿಂದೆ-ಮುಂದೆ ಯೋಚಿಸಲ್ಲ. ದೇಶಕ್ಕಾಗಿ ಆಡುವ ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ.
ರಣಜಿಯಲ್ಲೂ ಅಯ್ಯರ್ ಫ್ಲಾಪ್ ಪ್ರದರ್ಶನ:
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದ ಹೊರಗುಳಿದ ಶ್ರೇಯಸ್ ಅಯ್ಯರ್ ಸದ್ಯ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಕ್ವಾರ್ಟರ್ಫೈನಲ್ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಅಯ್ಯರ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಯ್ಯರ್ ಕೇವಲ 8 ಎಸೆತಗಳಲ್ಲಿ 3 ರನ್ ಗಳಿಸಿ ಔಟಾಗಿದ್ದಾರೆ.
ಬಿಸಿಸಿಐ ಪರ ಕಪಿಲ್ ದೇವ್ ಬ್ಯಾಟಿಂಗ್:
ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕೂಡ ಕೇಂದ್ರಗುತ್ತಿಗೆ ವಿಚಾರದಲ್ಲಿ ಬಿಸಿಸಿಐ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೆಲೆಯೂರಿದ ನಂತರ ಆಟಗಾರರು ದೇಶಿ ಕ್ರಿಕೆಟ್ನಿಂದ ಹೊರಬರುತ್ತಿರುವುದು ನನಗೆ ಬೇಸರ ತಂದಿದೆ. ಕೆಲವು ಆಟಗಾರರು ನರಳಿದರೆ ನರಳಲಿ, ಆದರೆ ದೇಶಕ್ಕಿಂತ ಯಾವುದೂ ಮುಖ್ಯವಾಗಬಾರದು. ದೇಶಿ ಕ್ರಿಕೆಟ್ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಬಿಸಿಸಿಐನ ಈ ಹೆಜ್ಜೆ ಅಗತ್ಯ ಎಂದು ಬಣ್ಣಿಸಿದ್ದಾರೆ.