ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಇಟ್ಟ ಬಾಂಬರ್ ಬಸ್ ನಿಲ್ದಾಣದಲ್ಲೇ ಟೈಮರ್ ಫಿಕ್ಸ್ ಮಾಡಿದ ವಿಡಿಯೋ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.
ಶಂಕಿತ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟ ಮಾಡಿದ್ದನು. ಆರೋಪಿಯು ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಫೋಟ ಮಾಡಿದ್ದಾನೆ. ಹಾಗಾದರೆ ಶಂಕಿತ ವ್ಯಕ್ತಿ ನಗರ ಬಿಟ್ಟು, ಬೆಂಗಳೂರಿನ ಹೃದಯ ಭಾಗಬಿಟ್ಟು, ಗಡಿ ಭಾಗದಲ್ಲೇ ಪ್ಲಾನ್ ಮಾಡಿದ್ದು ಯಾಕೆ? ಬಾಂಬ್ ಇಟ್ಟು ಒಂದೂವರೆ ಗಂಟೆ ಬಳಿಕ ಬಾಂಬ್ ಸ್ಪೋಟ ಆಗುವಂತೆ ಟೈಮ್ ಫಿಕ್ಸ್ ಮಾಡಿದ್ದು ಯಾಕೆ?
ಪೊಲೀಸರು ನಗರದಾದ್ಯಂತ ಅಲರ್ಟ್ ಆಗುವಷ್ಟರಲ್ಲಿ ಗಡಿ ದಾಟುವ ಪ್ಲಾನ್ ಮಾಡಿರಬಹುದು. ಒಂದು ವೇಳೆ ಸಿಟಿ ಒಳಗೆ ಬ್ಲಾಸ್ಟ್ ಆಗಿದ್ದರೆ ಅಲ್ಲಿಂದ ಪರಾರಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಕಡೆ ಅಲರ್ಟ್ ಆಗಿ ಬಾರ್ಡರ್ನಲ್ಲೂ ನಾಕಾಬಂದಿ ಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಗಡಿ ದಾಟಿದ ಬಳಿಕ ನಾಕಾಬಂದಿ ಹಾಕಿದರೂ ನಾನು ಸಿಗಲ್ಲ ಅನ್ನೋ ಪ್ಲಾನ್ ಆಗಿರಬಹುದು.
ಬಾಂಬರ್ ರಸ್ತೆಯಲ್ಲಿ ಬರುವಾಗ ಹೋಟೆಲ್ ಪ್ರವೇಶದ ವೇಳೆ, ಹೋಟೆಲ್ ಒಳಗಡೆ, ನಂತರ ಹೋಟೆಲಿನಿಂದ ತೆರಳುವಾಗ ಮೊಬೈಲಿನಲ್ಲಿ ಮಾತನಾಡಿಕೊಂಡು ಬಂದಿದ್ದಾನೆ. ಈತ ಮಾತನಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದಂತೆ ಪೊಲೀಸರು ಟವರ್ ಡಂಪ್ ಮಾಡಿ ಆ ಸಮಯದಲ್ಲಿ ಆ ಜಾಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್ಗಳನ್ನು ಪರೀಕ್ಷೆ ಮಾಡಿದ್ದಾರೆ. ಕೆಫೆಯ ಬಳಿ ಆ ಸಮಯದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ತನಿಖೆಯ ನಂತರ ಆತ ಡಮ್ಮಿ ಮೊಬೈಲ್ ಫೋನ್ ಬಳಸಿದ್ದ ವಿಚಾರ ಗೊತ್ತಾಗಿದೆ.
ಪೊಲೀಸರ ತನಿಖೆಯ ದಾರಿ ತಪ್ಪಿಸಲೆಂದೇ ಮೊಬೈಲ್ ಫೋನಿನಲ್ಲಿ ಮಾತನಾಡಿದಂತೆ ಪೋಸ್ ನೀಡುತ್ತಾ ಬಂದಿದ್ದ. ಕೆಫೆಯಿಂದ ತೆರಳುವಾಗಲೂ ಫೋನಿನಲ್ಲಿ ಮಾತನಾಡುತ್ತಾ ತೆರಳಿದ್ದ
ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿ ನಡೆದಿರುವುದು, ಡಮ್ಮಿ ಫೋನ್ ಬಳಸಿರುವುದು, ತಲೆಯನ್ನು ಕೆಳಗಡೆ ಹಾಕಿ ಹೆಜ್ಜೆ ಹಾಕಿರುವುದು, ಪರಿಚಯ ಸಿಗದೇ ಇರಲು ಮಾಸ್ಕ್ ಮತ್ತು ಹ್ಯಾಟ್ ಧರಿಸಿರುವುದನ್ನು ನೋಡಿದಾಗ ಆರೋಪಿ ಮೊದಲೇ ಬಹಳ ಸಿದ್ಧತೆ ನಡೆಸಿ ಕೃತ್ಯ ಎಸಗಿರುವುದು ಸ್ಪಷ್ಟವಾಗುತ್ತಿದೆ.