ಬೆಂಗಳೂರು: ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ಝಳಕ್ಕೆ ಜನ ತಂಪುಪಾನೀಯದ ಮೊರೆ ಹೋಗುತ್ತಿದ್ದಾರೆ. ಚಳಿಗಾಲದಲ್ಲೇ ಹೀಗೆ ಬಿಸಿಲಿದೆ, ಇನ್ನೂ ಬೇಸಿಗೆಯಲ್ಲಿ ಹೇಗೋ ಎಂಬ ಜನರ ಮಾತಿನಂತೆ ಹವಾಮಾನ ಇಲಾಖೆ ಕೂಡ ಈ ಕುರಿತು ಎಚ್ಚರಿಕೆ ನೀಡಿದೆ.
ಪೂರ್ವ ಭಾಗದ ಸಮುದ್ರದ ನೀರಿನ ಉಷ್ಣಾಂಶ 1.5 ಗಿಂತ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ಏಲಿನೋ ಎಂದು ಕರೆಯುತ್ತಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಮೂರು ತಿಂಗಳು ವಾಡಿಕೆಗಿಂತ 70% ಹೆಚ್ಚು ಉಷ್ಣತೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಡೀ ರಾಜ್ಯದಲ್ಲೇ ವಾಡಿಕೆಗಿಂತ ಹೆಚ್ಚಿನ ತಾಪಮಾನ ಮುಂದಿನ ಮೂರು ತಿಂಗಳಲ್ಲಿ ಕಾಣಬಹುದಾಗಿದೆ. ಅದೇ ರೀತಿ ಮಾರ್ಚ್ನಿಂದ ಮೇ ವೇಳೆಯಲ್ಲಿ ವಾಡಿಕೆಗಿಂತ 70% ರಷ್ಟು ಮಳೆಯಾಗುವ ಸಾಧ್ಯತೆ ಕೂಡ ಇದೆ.
ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಈ ಬೇಸಿಗೆಯಲ್ಲಿ ವಾಡಿಕೆಗಿಂತ 2 ರಿಂದ 3 ಡಿಗ್ರಿಯವರೆಗೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 37 ಡಿಗ್ರಿ ಇದ್ದರೇ ಉತ್ತರ ಒಳನಾಡಿನಲ್ಲಿ 39 ಡಿಗ್ರಿ ಇರಲಿದೆ. ಜೊತೆಗೆ ಉತ್ತರ ಒಳನಾಡಿನಲ್ಲಿ ಬಿಸಿಗಾಳಿಯ ಆತಂಕ ಕೂಡ ಎದುರಾಗಲಿದೆ. 4.5ಕ್ಕಿಂತ ಹೆಚ್ಚು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಬಿಸಿಗಾಳಿಯ ವಾತಾವರಣ ಇರಲಿದೆ