ಬೆಂಗಳೂರು:– KSRTC ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮಹಾಶಿವರಾತ್ರಿ ಹಿನ್ನೆಲೆ 1500 ಹೆಚ್ಚುವರಿ ವಿಶೇಷ ಬಸ್ ಒದಗಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಮಾರ್ಚ್ 10 ಮತ್ತು 11ರಂದು ವಾಪಸ್ ಬರುವವರಿಗಾಗಿ ವಿವಿಧ ನಗರಗಳಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದಲೂ ವಿಶೇಷ ಬಸ್ಗಳು ಕಾರ್ಯಾಚರಿಸಲಿವೆ.
ಈ ಹೆಚ್ಚುವರಿ ವಿಶೇಷ ಬಸ್ಸುಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮತ್ತಿತರ ಕಡೆಗಳಿಗೆ ಸಂಚರಿಸಲಿವೆ.
ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಕಡೆಗೆ ವಿಶೇಷ ಬಸ್ಗಳು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ.
ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿರಾಪಳ್ಳಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಝಿಕ್ಕೋಡ್, ತಮಿಳುನಾಡು ಮತ್ತು ಕೇರಳದ ಇತರ ಸ್ಥಳಗಳಿಗೆ ಎಲ್ಲಾ ಪ್ರೀಮಿಯಂ ವಿಶೇಷ ಬಸ್ಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ನಂತರ, ಮಾರ್ಚ್ 10 ಮತ್ತು 11 ರಂದು ಕರ್ನಾಟಕದ ವಿವಿಧ ನಗರಗಳಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ವಿಶೇಷ ಬಸ್ಗಳ ಸೇವೆ ಒದಗಿಸಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಇದರಿಂದ
ಹಬ್ಬ ಮುಗಿಸಿ ಊರುಗಳಿಂದ ಬೆಂಗಳೂರಿಗೆ ವಾಪಸಾಗುವವರಿಗೆ ಮತ್ತು ರಜೆಗೆಂದು ಬೆಂಗಳೂರಿಗೆ ಬಂದವರಿಗೆ ಊರುಗಳಿಗೆ ತೆರಳಲು ಅನುಕೂಲವಾಗಲಿದೆ.
ಸಾಮಾನ್ಯವಾಗಿ ಧೀರ್ಘ ರಜೆ, ವಾರಾಂತ್ಯ ಹಾಗೂ ಹಬ್ಬಗಳ ಸಂದರ್ಭಗಳಲ್ಲಿ ಕೆಎಸ್ಆರ್ಟಿಸಿ ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸುತ್ತದೆ. ಈ ಹಿಂದೆಯೂ ಅನೇಕ ಬಾರಿ ಸಂಸ್ಥೆಯು ಹೆಚ್ಚುವರಿ ವಿಶೇಷ ಬಸ್ ಸೇವೆ ಒದಗಿಸಿದೆ.
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿ ಈ ಬಾರಿ ಮಾರ್ಚ್ 8ರಂದು ಆಚರಿಸಲ್ಪಡಲಿದೆ. ಈ ದಿನ, ಶಿವ ದೇವರನ್ನು ಮೆಚ್ಚಿಸಲು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ವಿಶೇಷ ಪೂಜೆಯನ್ನು ಮಾಡುತ್ತಾರೆ. ಶಿವರಾತ್ರಿಯ ದಿನ ಪ್ರದೋಷ ಕಾಲ, ಅಂದರೆ ಸೂರ್ಯಾಸ್ತದ ನಂತರ ರಾತ್ರಿ ಮತ್ತು ಹಗಲಿನ ನಡುವಿನ ಸಮಯವನ್ನು ಪೂಜೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.