ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 29 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.
ಡೆಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 12ನೇ ಪಂದ್ಯದಲ್ಲಿ ಮೊದಲಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತವರು ಅಂಗಳದಲ್ಲಿ ಬೊಂಬಾಟ್ ಆಟ ಪ್ರದರ್ಶಿಸಿತು.
ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಡೆಲ್ಲಿಗೆ ಉತ್ತಮ ಆರಂಭ ನೀಡಿದರು. ಶಫಾಲಿ ವರ್ಮಾ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ನೊಂದಿಗೆ 28 ರನ್ ಗಳಿಸಿ ಔಟಾದರು. ಮೆಗ್ ಲ್ಯಾನಿಂಗ್ 38 ಎಸತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನೊಂದಿಗೆ 53 ರನ್ ಚಚ್ಚಿದರು. ಜೆಮಿಮಾ ರೊಡ್ರಿಗಸ್ 33 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ಗಳೊಂದಿಗೆ 69 ರನ್ ಗಳಿಸಿದರು.
ನಿಗದಿತ 20 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ಕಳೆದುಕೊಂಡು 192 ರನ್ಗಳ ಬೃಹತ್ ಮೊತ್ತ ಪೇರಿಸಿತು. 193 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬೈಗೆ ಆರಂಭದಲ್ಲೇ ಡೆಲ್ಲಿ ಬೌಲರ್ಗಳು ಆಘಾತ ನೀಡಿದರು. ಯಾಸ್ತಿಕಾ ಭಾಟಿಯಾ 6, ನಾಯಕಿ ಹರ್ಮನ್ಪ್ರೀತ್ ಕೌರ್ 6 ರನ್ ಗಳಿಸಿ ಔಟಾದರು. ಹೇಲಿ ಮ್ಯಾಥ್ಯೂಸ್ 29, ಅಮೆಲಿಯಾ ಕೆರ್ 17, ಪೂಜಾ ವಸ್ತ್ರಾಕರ್ 17 ರನ್ ಗಳಿಸಿದರು.
ಅಮನ್ದೀಪ್ ಕೌರ್ ಏಕಾಂಗಿ ಹೋರಾಟ
ಅಮನ್ದೀಪ್ ಕೌರ್ 42 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಯಾವೊಬ್ಬ ಬ್ಯಾಟರ್ ಸಹ ಅವರಿಗೆ ಉತ್ತಮ ಸಾಥ್ ನೀಡಲಿಲ್ಲ. ಪರಿಣಾಮ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ಜೆಸ್ ಜೊನಾಸೆನ್ 3, ಮರಿಜಾನ್ನೆ ಕಪ್ 2, ರಾಧಾ ಯಾದವ್, ಟಿಟಾಸ್ ಸಾಧು, ಶಿಖಾ ಪಾಂಡೆ ತಲಾ 1 ವಿಕೆಟ್ ಪಡೆದರು. ಜೆಮಿಮಾ ರೊಡ್ರಿಗಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.