ನ್ಯೂಯಾರ್ಕ್: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಥಿತ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈಗಾಗಲೇ ಟಿಕೆಟ್ ಖರೀದಿಗೆ ಐಸಿಸಿ ಅವಕಾಶ ನೀಡಿದ್ದು, ಸೋಮವಾರ ಎರಡು ಪಂದ್ಯಗಳಿಗೆ ಟಿಕೆಟ್ ಮಾರಾಟವಾಗಿದೆ.
ಭಾರತ Vs ಪಾಕಿಸ್ತಾನ ಹಾಗೂ ಭಾರತ Vs ಕೆನಡಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ಆಗಿದೆ. ಅದರಲ್ಲೂ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ದುಬಾರಿ ಬೆಲೆ ನಿಗದಿಯಾಗಿದೆ. ಅತಿಹೆಚ್ಚಿನ ಜನ ಸೇರುವ ಹಿನ್ನೆಲೆಯಲ್ಲಿ ಟಿಕೆಟ್ ದರಕ್ಕೆ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿ ಮಾರಾಟವಾಗಿದೆ. ನಿಜಕ್ಕೂ ಟಿಕೆಟ್ ಬೆಲೆ ಕೇಳಿದ್ರೆ ಒಂದು ಕ್ಷಣ ತಲೆತಿರುಗುವಂತೆ ಮಾಡುತ್ತೆ.
ಇದೇ ಮಾರ್ಚ್ 22 ರಿಂದ ಭಾರತದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(IPL 2024) ಟೂರ್ನಿ ಆರಂಭವಾಗಲಿದೆ. ಈ ಶ್ರೀಮಂತ ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವಕಪ್ ಹಬ್ಬ ಆರಂಭವಾಗಲಿದೆ. ಜೂನ್ 1ರಿಂದ ಮೆಗಾ ಟೂರ್ನಿಗೆ ಚಾಲನೆ ಸಿಗಲಿದ್ದು, ಜೂನ್ 9ರಂದು ಇಂಡೋ-ಪಾಕ್ ಫೈಟ್ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಮೈದಾನದಲ್ಲೇ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳ ಟಿಕೆಟ್ ಬೆಲೆ 6 ಡಾಲರ್ ನಿಂದ ಅಂದರೆ (497 ರೂ.) ಗಳಿಗೆ ಮಾರಾಟವಾಗುತ್ತಿವೆ. ಆದ್ರೆ ವಿಐಪಿ ಮತ್ತು ಪ್ರೀಮಿಯಂ ಟಿಕೆಟ್ಗಳು 33.15 ಲಕ್ಷ ರೂ.ಗಳಷ್ಟಿದೆ. ತೆರಿಗೆ ಸೇರಿಸಿದ್ರೆ 41.44 ಲಕ್ಷ ರೂ.ಗಳಷ್ಟಿದೆ. ಆದ್ರೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ತೆರಿಗೆ, ಪ್ಲಾಟ್ಫಾರ್ಮ್ ಹಾಗೂ ಇತರೇ ಶುಲ್ಕ ಸೇರಿ 1.86 ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ