ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರತಂಡ ಇತ್ತೀಚೆಗೆ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ವಿಮಾನ ಪ್ರಯಾಣ ಬೆಳೆಸಿತ್ತು. ಈ ವೇಳೆ ತಂಡವಿದ್ದ ವಿಮಾನವು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿತ್ತು. ಈ ಬಗ್ಗೆ ನಿರ್ದೇಶಕ ಎ.ಪಿ ಅರ್ಜುನ್ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಸಿಕೊಂಡು ವಿಮಾನದಲ್ಲಿ ಬರುತ್ತಿದ್ದ ‘ಮಾರ್ಟಿನ್’ ಸಿನಿಮಾ ತಂಡದವರಿಗೆ ಶಾಕ್ ಆಗಿತ್ತು. ಕಾರಣಾಂತರಗಳಿಂದ ವಿಮಾನದ ಹಾರಾಟದಲ್ಲಿ ತೊಂದರೆ ಉಂಟಾಗಿತ್ತು. ಇನ್ನೇನು ಚಿತ್ರತಂಡವಿದ್ದ ವಿಮಾನ ಅಪಘಾತ ಆಗುತ್ತದೆ ಎಂದು ಇಡೀ ಚಿತ್ರತಂಡದವರು ಭಯಗೊಂಡಿದ್ದರು. ಆ ಕ್ಷಣ ಹೇಗಿತ್ತು ಎಂಬುದನ್ನು ಎ.ಪಿ. ಅರ್ಜುನ್ ತೆರೆದಿಟ್ಟಿದ್ದಾರೆ.
ಅಂದು ನಮ್ಮೆಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಪಕ್ಕದಲ್ಲಿ ಸ್ವಾಮಿ ಕುಳಿತಿದ್ದರು. ಅವರ ಪಕ್ಕದಲ್ಲಿ ನಾಯಕಿ ವೈಭವಿ ಇದ್ದರು. ಅಂದು ಯಾರೂ ಧೈರ್ಯವಾಗಿ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ನಟಿ ವೈಭವಿ ಅವರು ತಂದೆ-ತಾಯಿಗೆ ಮೆಸೇಜ್ ಮಾಡಿದ್ದರು. ನಾವೆಲ್ಲ ಸತ್ತು ಹೋಗುತ್ತಿದ್ದೇವೆ. ನಾವೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಅಂತ ಮೆಸೇಜ್ ಮಾಡಿ ಜೋರಾಗಿ ಅಳುತ್ತಿದ್ದರು. ಅಂದು ಏನು ಅವಘಡ ನಡೆಯದೇ ಸೇಫ್ ಆದೆವು. ಆ ದೇವರೇ ನಮ್ಮನ್ನು ಕಾಪಾಡಿದ್ದು. ಇದು ಎಲ್ಲರಿಗೂ ಪುನರ್ ಜನ್ಮ ಎಂದು ಎ.ಪಿ. ಅರ್ಜುನ್ ಹೇಳಿದ್ದಾರೆ.