ವಂಚನೆಯ ಜಾಲಕ್ಕೆ ಸಿಲುಕಿ ರಷ್ಯಾದ ವ್ಯಾಗ್ನರ್ ಸೇನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಾರತದ ಹೈದರಾಬಾದಿನ ಯುವಕ ಉಕ್ರೇನ್ನಲ್ಲಿ ದುರಂತ ಸಾವಿಗೀಡಾಗಿದ್ದಾರೆ ಎಂದು ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ ಮೂಲಕ ಯುವಕ ಮೊಹಮ್ಮದ್ ಅಸ್ಫಾನ್ ಮೃತ ಯುವಕ ಎಂದು ಗುರುತಿಸಲಾಗಿದೆ. ಯುವಕನ ಕುಟುಂಬಸ್ಥರು ಪಾರ್ಥೀವ ಶರೀರವನ್ನು ರಷ್ಯಾದಿಂದ ತರಿಸಿಕೊಡುವಂತೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಪಾರ್ಥೀವ ಶರೀರವನ್ನು ಭಾರತಕ್ಕೆ ಕಳುಹಿಸಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸಂಸದರು ಹೇಳಿದ್ದಾರೆ.
ಯುವಕನ ಕುಟುಂಬದೊಂದಿಗೆ ಸಂಪರ್ಕ ನಡೆಸಿರುವ ರಷ್ಯಾದ ಅಧಿಕಾರಿಗಳು, ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಅವರ ದುರಂತ ಸಾವಿನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಲು ಸಕಲ ತಯಾರಿ ನಡೆಸುತ್ತಿದ್ದೇವೆ. ಮೊಹಮ್ಮದ್ ಅವರನ್ನು ಉಕ್ರೇನ್ ವಿರುದ್ದದ್ದ ಯುದ್ಧದಲ್ಲಿ ರಷ್ಯಾ ಸೇನೆಯ ಸಹಾಯಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಇನ್ನುಳಿದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಉದ್ಯೋಗ ವಂಚನೆಯ ಜಾಲಕ್ಕೆ ಸಿಲುಕಿದ್ದ ಹೈದರಾಬಾದಿನ ಮೂಲದ ಯುವಕ ರಷ್ಯಾದ ವ್ಯಾಗ್ನರ್ ಪಡೆಯಲ್ಲಿ ಸಿಲುಕಿದ್ದರು. ತೆಲಂಗಾಣ, ಗುಜರಾತ್, ಕರ್ನಾಟಕ (ಕಲಬುರಗಿ ಜಿಲ್ಲೆಯ ಮೂವರು), ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ 20ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿ ಸಿಲುಕಿದ್ದಾರೆ. ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದರು. ಈ ವೀಡಿಯೋ ಬೆಳಕಿಗೆ ಬರ್ತಿದ್ದಂತೆ ಅಸಾದುದ್ದೀನ್ ಓವೈಸಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಯುವಕರನ್ನು ರಕ್ಷಿಸುವಂತೆ ಒತ್ತಾಯಿಸಿದ್ದರು. ಅಷ್ಟರಲ್ಲೇ ಈ ದುರಂತೆ ನಡೆದು ಹೋಗಿದೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೈದರಾಬಾದ್ ಮೂಲದ ಯುವಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಯುವಕನ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.