ಹಿಂದೂ ಧರ್ಮೀಯರಿಗೆ ಮಹಾಶಿವರಾತ್ರಿ ಎಂಬುದು ಬಹುದೊಡ್ಡ ಹಬ್ಬಗಳಲ್ಲಿ ಒಂದು. ಈ ವರ್ಷ ಮಾರ್ಚ್ 8ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಈ ಮಂಗಳಕರ ದಿನದಂದು ಶಿವಾನುಗ್ರಹ ಪಡೆಯಲು ಸಾಕಷ್ಟು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಅದರಲ್ಲೂ ಉಪವಾಸ ವ್ರತ ಶಿವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಒಂದು. ಶಿವ ಭಕ್ತರು ಈ ಹಬ್ಬದ ಸಂದರ್ಭದಲ್ಲಿ ಉಪವಾಸ ವ್ರತಾಚರಣೆ ಮೂಲಕ ಶಿವ ಧ್ಯಾನವನ್ನು ಮಾಡುತ್ತಾರೆ. ಕೆಲವರು ಕಠಿಣ ಉಪವಾಸ ವ್ರತಾಚರಣೆಯನ್ನು ಮಾಡುವುದಿದೆ.
ಉಪವಾಸ ವೃತಾಚರಣೆಗೂ ಸಾಕಷ್ಟು ನಿಯಮಗಳಿವೆ. ನಿಯಮಾನುಸಾರ ಉಪವಾಸ ಕೈಗೊಂಡಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಹಾಗಾಗಿ, ಮಹಾಶಿವರಾತ್ರಿಯ ಉಪವಾಸವನ್ನು ಹೇಗೆ ಆಚರಿಸಬೇಕು
- ಉಪವಾಸ ಆಚರಿಸುವ ದಿನ ಬ್ರಹ್ಮ ಮುಹೂರ್ತ ಅಥವಾ ಸೂರ್ಯೋದಯಕ್ಕೆ ಮುನ್ನ ಏಳಬೇಕು.
- ಯಾವುದೇ ಪೂಜೆ, ಆಚರಣೆ, ವ್ರತಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮೊದಲು ಸಂಕಲ್ಪ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗೆಯೇ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಉಟ್ಟು ಕೈಯಲ್ಲಿ ಸ್ವಲ್ಪ ನೀರು ಮತ್ತು ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಶಿವ ದೇವರ ಮುಂದೆ ಉಪವಾಸದ ಸಂಕಲ್ಪ ಮಾಡಿ.
- ಕೆಲವರು ನೀರು ಆಹಾರ ಸೇವಿಸದೆ ಸಂಪೂರ್ಣ ಉಪವಾಸವನ್ನೂ ಆಚರಿಸುತ್ತಾರೆ. ಇನ್ನು ಕೆಲವರು ನೀರು ಸೇವಿಸುತ್ತಾರೆ. ಇನ್ನೊಂದಷ್ಟು ಉಪವಾಸ ಆಚರಿಸುವ ಭಕ್ತರು ಹಣ್ಣನ್ನು ಸೇವಿಸುವುದು ಕೂಡಾ ಇದೆ.
- ಉಪವಾಸ ವ್ರತಾಚರಣೆಯ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಸಂಪೂರ್ಣ ಶುದ್ಧವಾಗಿರಿಸಿಕೊಳ್ಳಿ. ಕೆಟ್ಟ ಯೋಚನೆಗಳು ಮನಸ್ಸಿಗೆ ಸುಳಿದಾಡದಂತೆ ನೋಡಿಕೊಳ್ಳಿ, ಕೆಟ್ಟ ಮಾತುಗಳನ್ನು ಬಳಸಬೇಡಿ. ಸಂಪೂರ್ಣ ಶಿವ ಧ್ಯಾನದಿಂದ ಆ ದಿನವನ್ನು ಕಳೆಯಿರಿ.
-
- ಈ ಉಪವಾಸವನ್ನು ಆಚರಿಸುವ ಭಕ್ತರು ದಿನಕ್ಕೆ ಹಲವು ಬಾರಿ ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸುವುದು ಒಳ್ಳೆಯದು
- ಉಪವಾಸದ ಸಮಯದಲ್ಲಿ ಪೂಜೆಯ ಬಳಿಕ ಶಿವ ದೇವರ ಕಥೆಗಳನ್ನು ಕೇಳಬಹುದು.
- ವೃತವನ್ನು ಆಚರಿಸುವಾಗ ಭಕ್ತರು ಸಾತ್ವಿಕ ಆಹಾರವನ್ನು ಸೇವಿಸಬೇಕು. ಬೇಳೆಕಾಳುಗಳು, ಅಕ್ಕಿ, ಗೋಧಿ ಮತ್ತು ಧಾನ್ಯಗಳಿಂದ ಮಾಡಿದ ಆಹಾರ ಬಿಟ್ಟು ರಾಗಿ, ಸಾಗು, ಹಣ್ಣುಗಳು ಹಾಗೂ ಕೆಲವು ತರಕಾರಿಗಳನ್ನು ಸೇವಿಸಬಹುದು. ಮಾಂಸಾಹಾರ ಹಾಗೂ ಬೆಳ್ಳುಳ್ಳಿ, ಈರುಳ್ಳಿ ಬೆರೆಸಿದ ಆಹಾರವನ್ನು ಕೂಡಾ ಸೇವಿಸಲೇಬಾರದು.
- ಉಪವಾಸದ ಪ್ರಯೋಜನವನ್ನು ಪಡೆಯಲು ಆಸ್ತಿಕರು ಸೂರ್ಯೋದಯದ ನಡುವೆ ಮತ್ತು ಚತುರ್ದಶಿ ತಿಥಿಯ ಅಂತ್ಯದ ಮೊದಲು ಉಪವಾಸವನ್ನು ಮುರಿದರೆ ಉತ್ತಮ ಎಂಬ ನಂಬಿಕೆ ಇದೆ.
- ವ್ರತದ ಸಮಯದಲ್ಲಿ ಶಿವ ದೇವರ ಪರಿವಾರವನ್ನು ಪೂಜಿಸುವುದು ಕೂಡಾ ಮಂಗಳಕರ
- ಮಹಾಶಿವರಾತ್ರಿಯ ವ್ರತಾಚರಣೆ ಮಾಡುವವರು ರಾತ್ರಿ ಜಾಗರಣೆ ಮಾಡಿ ಭಜನೆ-ಕೀರ್ತನೆ ಮಾಡುತ್ತಾ ದೇವರ ಧ್ಯಾನದಲ್ಲಿ ತೊಡಗಿಕೊಳ್ಳಬೇಕು.
- ಗರ್ಭಿಣಿಯರು, ಆರೋಗ್ಯ ಸಮಸ್ಯೆಯನ್ನು ಎದುರಿಸುವವರು ಅಥವಾ ಔಷಧಿಗಳನ್ನು ತೆಗೆದುಕೊಳ್ಳುವವರು ಉಪವಾಸ ವ್ರತ ಆಚರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು