ಬೆಂಗಳೂರು:- ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ ಗೆ ಸಂಬಂಧಿಸಿದಂತೆ ಎನ್ಐಎ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ.
ಕೆಫೆಯಲ್ಲಿ ಸ್ಫೋಟಿಸಿದ್ದ ಬಾಂಬ್ಗೆ ಅಮೋನಿಯಂ ನೈಟ್ರೇಟ್ ಬಳಸಿದ್ದಾನೆ ಅನ್ನೋದು ತನಿಖೆಯಲ್ಲಿ ದೃಢಪಟ್ಟಿರುವುದಾಗಿ NIA ಅಧಿಕಾರಿಗಳು ತಿಳಿಸಿದ್ದಾರೆ. ಅಮೋನಿಯಂ ನೈಟ್ರೇಟ್ ಅನ್ನು ಹೆಚ್ಚಾಗಿ ಕಲ್ಲು ಗಣಿಗಾರಿಕೆಯಲ್ಲಿ ಬಂಡೆಗಳನ್ನು ಸಿಡಿಸಲು ಬಳಸಲಾಗುತ್ತದೆ. ಇದೇ ಶಂಕಿತ ಉಗ್ರ ಬಳಸಿದ್ದ ಬಾಂಬ್ಗೆ ಇದೇ ಪೌಡರ್ ಅನ್ನು ಬಳಸಿದ್ದಾನೆ. ಆದ್ದರಿಂದ ಸದ್ಯಕ್ಕೆ ಅಮೋನಿಯಂ ನೈಟ್ರೇಟ್ ಸಾರ್ವಜನಿಕವಾಗಿ ಮಾರಟ ಮಾಡಲು ನಿಷೇಧಿಸಲಾಗಿದೆ
ಈ ಹಿಂದೆ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸಲ್ಫರಿಕ್ ಗನ್ ಪೌಡರ್ ಮತ್ತು ಪೊಟ್ಯಾಶಿಯಂ ನೈಟ್ರೇಟ್ ಕೆಮಿಕಲ್ಗಳನ್ನು ಬಳಸಿರುವುದು ಕಂಡುಬಂದಿತ್ತು. ಹಾಗಾಗಿ ಶಂಕಿತ ಉಗ್ರನನ್ನು ಪತ್ತಹೆಚ್ಚಲು ತನಿಖೆ ಚುರುಕುಗೊಳಿಸಿರುವ ಎನ್ಐಎ ಹೊರ ರಾಜ್ಯಗಳಿಂದ ಅಮೋನಿಯಂ ನೈಟ್ರೇಟ್ ಪೂರೈಕೆದಾರರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಬಾಂಬರ್ ಚಲನವಲನದ ಬಗ್ಗೆ ಮತ್ತಷ್ಟು ದೃಶ್ಯಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ತನಿಖಾಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಕೆಫೆಯಲ್ಲಿ ಬಾಂಬ್ ಇದ್ದ ಬ್ಯಾಗ್ ಇರಿಸಿದ್ದ ಬಾಂಬರ್ ಅಲ್ಲಿಂದ ಹಲವು ಬಸ್ ಬದಲಿಸಿದ್ದಾನೆ. ಸಮೀಪದ ಪ್ರಾರ್ಥನಾ ಮಂದಿರ ಬಳಿ ಹೋಗಿ ಅಲ್ಲಿ ಬಟ್ಟೆ ಬದಲಿಸಿದ್ದ. ಈ ಮೊದಲು ಬಳಸಿದ್ದ ಟೋಪಿ ಬಿಸಾಡಿ ಬೇರೊಂದು ಟೋಪಿ ಧರಿಸಿದ್ದ. ಮತ್ತೆ ಬಿಎಂಟಿಸಿ ಬಸ್ ಹತ್ತಿದ ಬಾಂಬರ್ ನೇರವಾಗಿ ಮಧ್ಯಾಹ್ನ 3 ಗಂಟೆಗೆ ಓಕಳಿಪುರಂನ ಸುಜಾತಾ ಬಸ್ ನಿಲ್ದಾಣದ ಬಳಿ ಬಂದಿದ್ದ. ಅಲ್ಲಿ ಬೀದರ್ಗೆ ತೆರಳುವ ಕೆಎಸ್ಆರ್ಟಿಸಿ ಬಸ್ ಹತ್ತಿ ರಾತ್ರಿ 8.58ರ ಹೊತ್ತಿಗೆ ಬಳ್ಳಾರಿಯಲ್ಲಿ ಇಳಿದಿದ್ದ. ಇಲ್ಲಿಯವರೆಗಿನ ಬಾಂಬರ್ ಚಲನವಲನಗಳು ಹಲವೆಡೆ ಸಿಸಿಟಿವಿಯಲ್ಲಿ ಸೆರೆಯಾಗಿವೆ.