ಬೆಂಗಳೂರು:- ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಹೀಗಾಗಿ ಯುವ ಜನತೆಯನ್ನು ತಮ್ಮತ್ತ ಸೆಳೆಯಲು ಬಿಜೆಪಿ ರೀಲ್ಸ್ ಮೊರೆ ಹೋಗಿದೆ.
ನಮೋ ಯುವ ಭಾರತ ಫೆಲೋಶಿಫ್ ಕಾರ್ಯಕ್ರಮದಡಿ ರೀಲ್ಸ್ ನಿರ್ಮಾಣ ಸ್ಪರ್ಧೆ ಆಯೋಜಿಸಲಾಗಿದ್ದು, ಇದು ಒಂದು ತಿಂಗಳ ಕಾಲ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಯೋಜನೆಗಳು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತ ರೀಲ್ಸ್ ಮಾಡಬೇಕಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಿದವರ ಪೈಕಿ ಗರಿಷ್ಠ ಲೈಕ್ಸ್ ಪಡೆದ ಅತ್ಯುತ್ತಮ 10 ರೀಲ್ಸ್ಗಳನ್ನು ಗುರುತಿಸಿ ಅದನ್ನು ಮಾಡಿದವರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಭೇಟಿಯ ಅವಕಾಶ ದೊರೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರ ಎಲ್ಲಾ ರೀಲ್ಸ್ಗಳನ್ನು ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಬಿಜೆಪಿ ಯುವ ಮೋರ್ಚಾ ಹಂಚಿಕೊಳ್ಳಲಿದೆ. ಅತ್ಯುತ್ತಮವಾದ 3 ರೀಲ್ಸ್ಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರ ರಾಜ್ಯ ನಾಯಕರು ತಮ್ಮ ಪೇಜ್ನಲ್ಲಿ ಹಂಚಿಕೊಳ್ಳಲಿದ್ದಾರೆ.
ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ ಎಂಬ 4 ವಿಭಾಗದಲ್ಲಿ 90 ಸೆಕೆಂಡ್ಗಳ ರೀಲ್ಸ್ ಮಾಡುವ ಸ್ಫರ್ಧೆ ಇದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ತಿಳಿಸಿದೆ. ರೀಲ್ಸ್ ಮೂಲಕ ಮೊದಲ ಮತದಾರರು ಮತ್ತು ಯುವ ಮತದಾರರನ್ನು ಸೆಳೆಯುವ ಜವಾಬ್ದಾರಿ ಬಿಜೆಪಿ ಯುವ ಮೋರ್ಚಾ ಹೆಗಲಿಗೆ ವಹಿಸಲಾಗಿದೆ.