ಕಿರುತೆರೆ ಮತ್ತು ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಮೇಲೆ ಗುರುತರ ಆರೋಪ ಬಂದಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ, ಯುವತಿಯರ ಜೊತೆ ನಡುರಸ್ತೆಯಲ್ಲೇ ಲಕ್ಷ್ಮಿ (Lakshmi Siddaiah) ರಂಪಾಟ ಮಾಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ ಕೂಡ ನಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಕಳೆದ ಡಿಸೆಂಬರ್ 6 ರಂದು ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮಾಧುರಿ ಮತ್ತು ಅವರ ಸೋದರಿ ಐಶ್ವರ್ಯಗೆ ನಟಿ ಲಕ್ಷ್ಮಿ ಅವರ ಕಾರು ಡಿಕ್ಕಿ ಹೊಡೆದಿದೆ. ಲಕ್ಷ್ಮಿ ಆಕ್ಸಿಡೆಂಟ್ ಮಾಡಿದ್ದಲ್ಲದೇ, ಮಾಧುರಿ ಮತ್ತು ಐಶ್ವರ್ಯ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರಂತೆ. ಜೊತೆಗೆ ಇವರ ಮೊಬೈಲ್ ಕೂಡ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಟಿ ಲಕ್ಷ್ಮಿ ಚಲಾಯಿಸುತ್ತಿದ್ದ ಕಾರು ಮಾಧುರಿ ಮತ್ತು ಐಶ್ವರ್ಯ ಗಾಡಿಗೆ ಡಿಕ್ಕಿ ಹೊಡೆದಿದೆ. ಅಲ್ಲಿಂದ ಮಾತಿಗೆ ಮಾತು ಶುರುವಾಗಿದೆ. ಲಕ್ಷ್ಮಿ ಮತ್ತು ಅವರ ಜೊತೆಗಿದ್ದ ಆನಂದ್ ಕುಮಾರ್ ಎನ್ನುವವರು ಹಲ್ಲೆ ಮಾಡಿದ್ದಾರೆ ಎಂದು ಈ ಸೋದರಿಯರು ಆರೋಪ ಮಾಡಿದ್ದಾರೆ. ಜೊತೆಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ. ಗಲಾಟೆ ನಡೆದು 3 ತಿಂಗಳಾದರೂ ಪೊಲೀಸರು ಕ್ರಮ ತಗೆದುಕೊಂಡಿಲ್ಲ ಎನ್ನುವುದು ಸೋದರಿಯರ ಆರೋಪ. ಮೊಬೈಲ್ ಸಹ ವಾಪಾಸ್ಸು ಕೊಡಿಸಿಲ್ಲ ಎನ್ನುತ್ತಾರೆ ಹಲ್ಲೆಗೊಳಗಾದವರು.