ದಲಿತರ ಪರಿಸ್ಥಿತಿ ಹೇಗಿದೆ ಎಂದರೆ, ಮೊದಲಿನಿಂದಲೂ ಓಟು ನಮ್ಮದು ಆದರೆ ರಾಜ್ಯಭಾರ ನಿಮ್ಮದು ಎಂದು ಹೇಳಿರುವ ಸಚಿವ ಡಾ. ಎಚ್ಸಿ ಮಹದೇವಪ್ಪ ಅವರ ಮಾತು ಸತ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಮಾತನಾಡಿದ ಅವರು, ಮಹದೇವಪ್ಪ ಹಿರಿಯ ಸಚಿವರು, ದುರ್ಬಲ ವರ್ಗದವರು ಅದರಲ್ಲೂ ದಲಿತರ ಪರ ಹೋರಾಟ ಮಾಡಿಕೊಂಡು ಬಂದವರು. ಮಹದೇವಪ್ಪ ಹೇಳಿಕೆಯನ್ನು ಗಂಭೀರವಾಗಿ ತೆಗೆದು ಕೊಳ್ಳಬೇಕು ಎಂದರು.
“ಮೊದಲಿನಿಂದಲೂ ಓಟು ನಮ್ಮದು, ರಾಜ್ಯಭಾರ ನಿಮ್ಮದು ಅಂತ ಅವರು ಹೇಳಿದ್ದಾರೆ. ಅದು ಸತ್ಯ ಕೂಡ ಎಂದು ನನಗೆ ಅನಿಸುತ್ತದೆ. ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕ ಮಾಡಿದ್ದೇವೆ. ಅವರ ಆಶಯದ ಪ್ರಕಾರ ದಲಿತ ಸಮುದಾಯಕ್ಕೆ ಕರ್ನಾಟಕದಲ್ಲಿ ಅವಕಾಶ ಇದೆ. ಈ ವಿಚಾರವನ್ನು ಮುಂದಿನ ನಿರ್ಣಾಯಕ ಹಂತದಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ” ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಬೇಕಾದ ಸಿದ್ದತೆ ನಮ್ಮಲ್ಲಿ ಅಷ್ಟು ಕಾಣುತ್ತಿಲ್ಲ. ತಕ್ಷಣ ಎಚ್ಚೆತ್ತುಕೊಂಡು ನಾವೂ ರಾಜ್ಯಾದ್ಯಂತ ಪ್ರವಾಸ ಮಾಡಬೇಕು. ಇಲ್ಲಿಯವರೆಗೆ ಕೇವಲ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾತ್ರ ನಡೆಯುತ್ತಿದೆ ಎಂದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಸಿಎಂ ಹಾಗೂ ಡಿಸಿಎಂ ಜವಾಬ್ದಾರಿ ತೆಗೆದುಕೊಂಡು 25 ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತಾರೆ. ಕೆಪಿಸಿಸಿ ಅಧ್ಯಕ್ಷರು ಡಿಸಿಎಂ ಇಬ್ಬರೂ ಅವರೇ, ಹಾಗಾಗಿ ಹೆಚ್ಚಿನ ಜವಾಬ್ದಾರಿ ಅವರ ಮೇಲಿದೆ ಎಂದು ಹೇಳಿದರು.