ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ, 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಮಾರ್ಚ್ 9) ಚಾಲನೆ ನೀಡಿದ್ದಾರೆ.
ಜಗತ್ತಿನಲ್ಲೇ ಅತಿ ಉದ್ದದ ಅವಳಿ ಸುರಂಗ ಎಂಬ ಖ್ಯಾತಿಗೆ ಭಾಜನವಾಗಿರುವ ಈ ಸುರಂಗ ಮಾರ್ಗವು ಸಂಪರ್ಕ, ಸಾಗಣೆ ಸೇರಿ ವ್ಯೂಹಾತ್ಮಕವಾಗಿಯೂ ಪ್ರಾಮುಖ್ಯತೆ ಪಡೆದಿದೆ.
ಕಮೆಂಗ್ ಜಿಲ್ಲೆಯ 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸುರಂಗಕ್ಕೆ 825 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ಗಡಿ ರಸ್ತೆ ಸಂಘಟನೆಯು ಸುರಂಗ ನಿರ್ಮಿಸಿದೆ. ಸೆಲಾ ಸುರಂಗ ಯೋಜನೆ ಅಡಿಯಲ್ಲಿ ಎರಡು ಸುರಂಗಗಳನ್ನು ನಿರ್ಮಿಸಲಾಗಿದ್ದು, ಒಂದು ಸುರಂಗವು 980 ಮೀಟರ್ ಉದ್ದವಾಗಿದೆ. ಮತ್ತೊಂದು ಸುರಂಗವು 1,550 ಮೀಟರ್ ಉದ್ದ ಇದೆ. ಇದು ತೇಜ್ಪುರದಿಂದ ತವಾಂಗ್ಗೆ ಸಂಪರ್ಕ ಕಲ್ಪಿಸಲಿದೆ. ಎರಡೂ ಸುರಂಗಗಳ ನಡುವೆ 1,200 ಮೀಟರ್ ಉದ್ದದ ಲಿಂಕ್ ರೋಡ್ ಕೂಡ ಇದೆ.
ಅರುಣಾಚಲ ಪ್ರದೇಶದಲ್ಲಿ ಗಡಿ ತಂಟೆ ಮಾಡುವ ಚೀನಾಗೆ ಸೆಲಾ ಸುರಂಗವು ವ್ಯೂಹಾತ್ಮಕವಾಗಿ ಪ್ರಮುಖವಾಗಿದೆ. ಅದರಲ್ಲೂ, ತಮ್ಮ ದೇಶದ ಪುರಾತನ ಪ್ರದೇಶ ಎಂಬುದಾಗಿ ಕ್ಯಾತೆ ತೆಗೆಯುವ ತವಾಂಗ್ ಪ್ರದೇಶದಲ್ಲಿ ಈ ಸುರಂಗವು ಸಂಪರ್ಕ ಕಲ್ಪಿಸಲಿದೆ. ತವಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಹೆಚ್ಚು ನಿಗಾ ಇರಿಸಲು ಸಾಧ್ಯವಾಗಲಿದೆ. ಇನ್ನು, ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಹೆಚ್ಚಿನ ಸಂಖ್ಯೆ ಸೈನಿಕರನ್ನು ಕ್ಷಿಪ್ರವಾಗಿ ನಿಯೋಜಿಸಲು, ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕೂಡ ಅನುಕೂಲವಾಗಲಿದೆ.
ಅರುಣಾಚಲ ಪ್ರದೇಶದಲ್ಲಿ ಚಳಿಗಾಲದಲ್ಲಿ ಭಾರಿ ಪ್ರಮಾಣದ ಹಿಮಪಾತದಿಂದ ಹತ್ತಾರು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗುತ್ತದೆ. ಆದರೆ, ಸೆಲಾ ಸುರಂಗವು ಎಲ್ಲ ಹವಾಮಾನ, ಅದರಲ್ಲೂ ಚಳಿಗಾಲದಲ್ಲಿ ಕೂಡ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ.