ಲೋಕಸಭೆ ಚುನಾವಣೆಗೆ ಕರ್ನಾಟಕದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುವ ವಿಚಾರವಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಬಿಜೆಪಿ (BJP) ಹೈಕಮಾಂಡ್ ರಾಜ್ಯ ನಾಯಕರಿಗೆ ಮತ್ತೆ ಬುಲಾವ್ ಕಳಿಸಿದೆ.
ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ನಾಳೆ ಸಂಜೆ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಭೆ ನಡೆಯಲಿದ್ದು ಅದಕ್ಕೂ ಮುನ್ನ ರಾಜ್ಯ ನಾಯಕರ ಜೊತೆ ಮೂರನೇ ಸುತ್ತಿನ ಚರ್ಚೆ ನಡೆಸುವುದು ಹೈಕಮಾಂಡ್ ಉದ್ದೇಶವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್, ಬಿವೈ ವಿಜಯೇಂದ್ರ ಮತ್ತಿತರ ರಾಜ್ಯ ನಾಯಕರು ದೆಹಲಿಗೆ ತೆರಳಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರ ಜೊತೆ ಮಾತುಕತೆ ನಡೆಸಿ ವಾಪಸಾಗಿದ್ದರು.
ಈ ಮಧ್ಯೆ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂಬ ಊಹಾಪೋಹಗಳು ಹರಡಿವೆ. ಈ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಾಲ್ಕು ಗೋಡೆಗಳ ಮಧ್ಯೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆದಿರುತ್ತದೆ.ಆ ಎಲ್ಲ ಮಾಹಿತಿಗಳನ್ನು ಮಾಧ್ಯಮದವರ ಮುಂದೆ ಬಹಿರಂಗಪಡಿಸಲಾಗದು ಎಂದು ಹೇಳಿದ್ದಾರೆ.