ಹಿಂದಿಯ ಬಿಗ್ ಬಾಸ್ ಒಟಿಟಿ 2ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಎಲ್ವಿಶ್ ಯಾದವ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಒಂದೊಂದೇ ರಂಪಾಟ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೆಸ್ಟೋರೆಂಟ್ ಒಂದರಲ್ಲಿ ಒಬ್ಬರಿಗೆ ಹೊಡೆದ ವಿಡಿಯೋ ವೈರಲ್ ಆಗಿತ್ತು. ಇದೀಗ ಎಲ್ವಿಶ್ ಯಾದವ್ ಅವರು ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ಯುಟ್ಯೂಬರ್ ಸಾಗರ್ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದರು. ಈಗ ಇದಕ್ಕೆ ಸಾಕ್ಷಿ ಸಿಕ್ಕಿದೆ. ಸಾಗರ್ ಅವರು ಕೊಠಡಿಯಲ್ಲಿ ಕುಳಿತಿದ್ದರು. ಈ ವೇಳೆ ಎಲ್ವಿಶ್ ಯಾದವ್ ಅವರು ಬರುತ್ತಿದ್ದಂತೆ ಹ್ಯಾಂಡ್ಶೇಕ್ ಮಾಡಲು ಹೋಗಿದ್ದಾರೆ. ಈ ವೇಳೆ ಎಲ್ವಿಶ್ ಅವರು ಸಾಗರ್ ಮೇಲೆ ಹಲ್ಲೆ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
‘ಎಲ್ವಿಶ್ ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಒಬ್ಬನೇ ಇದ್ದೆ. ಎಲ್ವಿಶ್ ಹಲವು ಜನರನ್ನು ಕರೆ ತಂದಿದ್ದರು. ಇದರ ಪೂರ್ತಿ ವಿಡಿಯೋನ ಬೆಳಿಗ್ಗೆ ಪೋಸ್ಟ್ ಮಾಡುತ್ತೇನೆ. ನನ್ನ ಬಳಿಯೂ ರೆಕಾರ್ಡಿಂಗ್ ಇದೆ. ನನ್ನ ತುಟಿ ಬಳಿ ಗಾಯವಾಗಿದೆ’ ಎಂದು ಸಾಗರ್ ಆರೋಪ ಮಾಡಿದ್ದರು. ಇದಾದ ಬೆನ್ನಲ್ಲೇ ಅವರು ವಿಡಿಯೋ ರಿವೀಲ್ ಮಾಡಿದ್ದಾರೆ.
ಸಾಗರ್ ಠಾಕೂರ್ ಅವರು ಈಗಾಗಲೇ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ವಿಡಿಯೋ ನೋಡಿದ ಬಳಿಕ ಎಲ್ವಿಶ್ ಯಾದವ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.