ಬೆಂಗಳೂರು- ಕೆಲವರಿಗೆ ಕೂತರೇ,ನಿಂತರೇ,ಮಲಗಿದ್ರೆ ಸಿನಿಮಾದೇ ಧ್ಯಾನ..! ಸಿನಿಮಾನೇ ಉಸಿರು..! ಸಿನಿಮಾನೇ ಎಲ್ಲವೂ..! ‘ಕೆರೆಬೇಟೆ’ ಸಿನಿಮಾವನ್ನ ಶತಾಯಗತಾಯ ಗೆಲ್ಲಿಸಲೇಬೇಕು ಎಂಬ ಓಟದಲ್ಲಿರೋ ನಟ ಗೌರಿಶಂಕರ್ ಕಲಾಜೀವನಕ್ಕೂ ಈ ಮೇಲಿನ ಸಾಲುಗಳಿಗೂ ಸಂಬಂಧವಿದೆ. ಸ್ಯಾಂಡಲ್ ವುಡ್ ನಲ್ಲಿ ನಡಿತಿರೋ ಹೊಸ ಪ್ರಯೋಗಗಳಿಗೆ ನಾವು ಕರ್ಚಿಫು ಹಾಕ್ಲೇಬೇಕು ಅಂತ ಗೌರಿಶಂಕರ್ ಪಣ ತೊಟ್ಟಾಗಿದೆ. ಕೊಟ್ಟ ದುಡ್ಡಿಗೆ ಮೋಸವಿಲ್ಲದ ಅಪ್ಪಟ ಮಲೆನಾಡಿನ ಕಥೆಯನ್ನ ಕೆರೆಬೇಟೆ ಸೂಸುತ್ತಿದೆ. ಹಳ್ಳಿಸೊಗಡಿನ ಸ್ಟೋರಿಯನ್ನ ಕರ್ಮಾಶಿಯಲ್ ಆಗಿ ಹೇಗೆ ಹೇಳಬಹುದು ಎಂಬುದಕ್ಕೆ ‘ಕೆರೆಬೇಟೆ’ ಸಾಕ್ಷಿಯಾಗೋ ಚಾನ್ಸ್ ಇದೆ. ಯಾಕಂದ್ರೆ ಕೆರೆಬೇಟೆ ಟ್ರೈಲರ್ ಹಾಗೂ ಮೇಕಿಂಗ್ ಬಿಡುಗಡೆಯಾದಗಿನಿಂದಲೂ ಗೌರಿಶಂಕರ್ ಗೆ ಚಿತ್ರರಂಗ ಹಾಗೂ ಪ್ರೇಕ್ಷಕರಿಂದ ಬಂದಿರೋ ಮೆಚ್ಚುಗೆಯೇ ಯಶಸ್ಸಿಗೆ ಶಾರ್ಟ್ ಕಟ್.
2010ರಲ್ಲಿ ಬಂದ ಅಣಜಿ ನಾಗರಾಜ್ ನಿರ್ಮಾಣದ ‘ಜೋಕಾಲಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡ ಗೌರಿಶಂಕರ್, ನಂತರ ‘ರಾಜಹಂಸ’ದಲ್ಲಿ ಆಕ್ಟ್ ಮಾಡಿದ್ರು. ಆಮೇಲೆ ಯಾಕೋ ಏನೋ ಗೌರಿಶಂಕರ್ ಸಂಥಿಂಗ್ ಸ್ಪೆಷಲ್ ಮಾಡ್ಲೇಬೇಕು ಅಂತ ಹಠಕ್ಕೆ ಬಿದ್ರು. ಅದೇ ಹಠ ತೆಗೆದುಕೊಂಡಿದ್ದು ಬರೋಬ್ಬರಿ 6 ವರ್ಷ. ಈ ಆರು ವರ್ಷಗಳಲ್ಲಿ ಗೌರಿಶಂಕರ್ ಸಾಕಷ್ಟು ಮಾಗಿದ್ದಾರೆ, ಸೊರಗಿದ್ದಾರೆ, ಸಿನಿಮಾಪಟ್ಟುಗಳನ್ನ ಕಲಿತಿದ್ದಾರೆ, ಬೆಳೆದಿದ್ದಾರೆ. ಈ ಲಾಂಗ್ ಗ್ಯಾಪ್, ಕಂಬ್ಯಾಕ್ ಪದಗಳನ್ನ ಸರಿಯಾಗಿಯೇ ಬಳಸಿಕೊಳ್ಳಬೇಕು ಅಂತ ಗೌರಿಶಂಕರ್ ಡಿಸೈಡ್ ಆಗಿಬಿಟ್ಟಿದ್ದಾರೆ. ಅದರ ಪ್ರತಿಫಲವೇ ಈ ‘ಕೆರೆಬೇಟೆ’. ಟ್ರೈಲರ್ ನೋಡಿದ ತಕ್ಷಣವೇ ಇಂತಹ ಉತ್ಸಾಹಿತಂಡ ಬೆಳೆಯಬೇಕು ಎಂಬ ಕಾಮೆಂಟ್ಸ್ ಸೆಕ್ಷನ್ ಓಪನ್ ಆಗಿದೆ. ‘ಕಾಂತಾರ’ ನಂತರ ಇಂತಹ ಪ್ರಯತ್ನಗಳಿಗೆ ಆರಂಭದಲ್ಲೇ ಮಾಸ್ ಓಪನಿಂಗ್ ಸಿಕ್ಕಿದ್ರೂ ಆಶ್ಚರ್ಯವಿಲ್ಲ..!
ಕಥೆಯ ಬಗ್ಗೆ ಮಾತ್ರ ಯಾವ ಸುಳಿವನ್ನೂ ಬಿಟ್ಟುಕೊಡದ ‘ಕೆರೆಬೇಟೆ’ ಚಿತ್ರತಂಡ, ತನ್ನ ಕಂಟೆಂಟ್ ಮೇಲೆ, ಪ್ರೇಕ್ಷಕರ ಬದಲಾದ ಸಿನಿಅಭಿರುಚಿಯ ಮೇಲೆ ಮಾತ್ರ ನಂಬಿಕೆ ಇಟ್ಟಿದೆ. ತಾರಾಗಣದಲ್ಲಿ ಬಿಂದುಶಿವರಾಮ್, ಕೆಜಿಎಫ್ ಸಂಪತ್, ಹರಿಣಿಶ್ರೀಕಾಂತ್, ಗೋಪಾಲಕೃಷ್ಣದೇಶಪಾಂಡೆ, ವರ್ಧನ್ ತೀರ್ಥಹಳ್ಳಿ, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ ಕಾಣಿಸಿಕೊಂಡಿದ್ದು, ಇವರೆಲ್ಲರಿಗೂ ಸಿನಿಮಾ ಮತ್ತೊಂದು ಹೊಸ ಕೆರಿಯರ್ ವೇಗ ಸಿಗೋ ಸಿಗ್ನಲ್ ಸಿಕ್ಕಿದೆ. ನಿರ್ದೇಶಕ ರಾಜ್ ಗುರು ಹಾಗೂ ಕ್ಯಾಮೆರಾ ಕಣ್ಣು ಕೀರ್ತನ್ ಪೂಜಾರಿ ಈ ಸಲ ತಮ್ಮ ಕೆಲಸದ ಗಟ್ಟಿ ಮಜಲನ್ನ ತೋರಿಸೋ ಆಸೆಯಲ್ಲಿದ್ದಾರೆ. ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಾಲಿಧನಂಜಯ್ ಬೆಂಬಲದ ಧ್ವನಿಗಳೇ ಕೆರೆಬೇಟೆ ಆಸರೆ. ಕನ್ನಡದ ಸಿನಿಮಾಗಳಿಗೆ ಆಡಿಯನ್ಸ್ ಬರ್ತಿಲ್ವಾ..? ಹೊಸಬರ ಕನಸುಗಳಿಗೆ ಯಾರು ನಿಲ್ಲಲ್ವಾ..? ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾಗಳನ್ನ ಉಳಿಸಿಕೊಳ್ಳೊದು ಹೇಗೆ ಎಂಬ ರಾಶಿರಾಶಿ ಪ್ರಶ್ನೆಗಳ ನಡುವೆಯೂ ಕೆರೆಬೇಟೆ ಕಂಗೋಳಿಸಲು ತಯಾರಾಗಿದೆ. ಚಿತ್ರಮಂದಿರಗಳಲ್ಲಿ ಮೀನು ಬೇಟೆಗೆ ಇಳಿಯೋ ಕೆರೆಬೇಟೆ, ವಿಭಿನ್ನ ಕಾನ್ಸೆಪ್ಟ್ ಹಾಗೂ ಗಟ್ಟಿ ಮನರಂಜನೆಯಿಂದ ಪ್ರೇಕ್ಷಕರ ಹೃದಯಗಳನ್ನೂ ಬೇಟೆಯಾಡುತ್ತಾ..? ಇದೇ ಶುಕ್ರವಾರ ‘ಕೆರೆಬೇಟೆ’ ಕನಸಿನ ಸಾಗರಕ್ಕೆ ಕಿಕ್ ಸ್ಟಾರ್ಟ್..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ