ತೆಲುಗು ಸಿನಿಮಾ ರಂಗದ ನಿರ್ದೇಶಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೂರ್ಯ ಕಿರಣ್ ನಿಧನರಾಗಿದ್ದಾರೆ. ಜಾಂಡಿಸ್ ನಿಂದ ಬಳಲುತ್ತಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ.
51 ವರ್ಷದ ಸೂರ್ಯ ಕಿರಣ್ ಸಾವನ್ನು ಅವರ ಸ್ನೇಹಿತರು ಖಚಿತಪಡಿಸಿದ್ದಾರೆ. ಸೂರ್ಯ ಕಿರಣ್ ನಿಧನಕ್ಕೆ ಟಾಲಿವುಡ್ನ ಅನೇಕರು ಕಂಬನಿ ಮಿಡಿದಿದ್ದಾರೆ. ಸಿನಿಮಾದ ಜೊತೆಗೆ ತೆಲುಗು ‘ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಸೂರ್ಯ ಕಿರಣ್ ಫೇಮಸ್ ಆಗಿದ್ದರು.
ಸೂರ್ಯ ಕಿರಣ್ ಅವರ ನಿಧನದ ಸುದ್ದಿಯನ್ನು ಪಿಆರ್ಒ ಸುರೇಶ್ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ಜಾಂಡಿಸ್ನಿಂದ ಸೂರ್ಯ ಕಿರಣ್ ನಿಧನರಾಗಿದ್ದಾರೆ. ತೆಲುಗಿನಲ್ಲಿ ‘ಸತ್ಯಂ’, ‘ರಾಜು ಭಾಯ್’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಎಕ್ಸ್ನಲ್ಲಿ (ಟ್ವಿಟರ್) ಸುರೇಶ್ ಅವರು ಪೋಸ್ಟ್ ಮಾಡಿದ್ದಾರೆ.
ಸೂರ್ಯ ಕಿರಣ್ ಕುಟುಂಬದವರು ಮೂಲತಃ ಕೇರಳದ ತಿರುವನಂತಪುರದವರು. ಚೆನ್ನೈನಲ್ಲಿ ಜನಿಸಿದ ಸೂರ್ಯ ಕಿರಣ್ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು. ಆ ಮೂಲಕ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದರು. ಆಗ ಅವರನ್ನು ಮಾಸ್ಟರ್ ಸುರೇಶ್ ಎಂದು ಕರೆಯಲಾಗುತ್ತಿತ್ತು. ಸೂರ್ಯ ಕಿರಣ್ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಸತ್ಯಂ’ 2003ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ಮತ್ತು ಸುಮಂತ್ ಅವರು ಮುಖ್ಯಭೂಮಿಕೆ ಕಾಣಿಸಿಕೊಂಡಿದ್ದರು.
ಕೆಲವು ವರ್ಷಗಳಿಂದ ಈಚೆಗೆ ಸೂರ್ಯ ಕಿರಣ್ ಅವರು ನಟನೆ ಮತ್ತು ನಿರ್ದೇಶನದಿಂದ ದೂರ ಉಳಿದುಕೊಂಡಿದ್ದರು. ಕಮ್ಬ್ಯಾಕ್ ಮಾಡಬೇಕು ಎಂಬ ಆಲೋಚನೆ ಅವರಿಗೆ ಇತ್ತು. ಅಷ್ಟರಲ್ಲಾಗಲೇ ಅನಾರೋಗ್ಯದಿಂದ ನಿಧನರಾಗಿದ್ದಾರೆ.