ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಬಳಿಕ ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಕರ್ನಾಟಕ ಸೇರಿದಂತೆ ದಕ್ಷಿಣದ ಪಂಚ ರಾಜ್ಯಗಳಲ್ಲಿ ಪ್ರಧಾನಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾರ್ಚ್ 15 ರಿಂದ 19 ರವರೆಗೆ ದಕ್ಷಿಣದ 5 ರಾಜ್ಯಗಳಲ್ಲಿ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರವಾಸ ನಡೆಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಲು ಮೋದಿ ತಂತ್ರ ಹೆಣೆದಿದ್ದಾರೆ.
ಮಾ.15 ರಂದು ಕೋಲಾರಕ್ಕೆ ಭೇಟಿ ನೀಡಲಿದ್ದು ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಫೋಕಸ್ ಮಾಡಲಿದ್ದಾರೆ. ಮಾ.17 ರಂದು ಶಿವಮೊಗ್ಗ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಬಗ್ಗೆ ವಿಶೇಷ ಗಮನ ನೀಡಲಿದ್ದಾರೆ. ಮಾ.18 ರಂದು ಬೀದರ್ ಹಾಗೂ ಕಲಬುರಗಿ ಮತ್ತು ಮಾ.19 ರಂದು ಧಾರವಾಡಕ್ಕೆ ಭೇಟಿ ನೀಡಲಿದ್ದು, ಬೆಳಗಾವಿ, ಹಾವೇರಿ ಜಿಲ್ಲೆಗಳ ಮೇಲೆ ಫೋಕಸ್ ಮಾಡಲಿದ್ದಾರೆ. ಈ ವೇಳೆ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.