ಲೋಕಸಭೆ ಚುನಾಚಣೆಗೆ (Lok Sabha Election) ಮುನ್ನ ಮೋದಿ ಸರ್ಕಾರ (Narendra Modi Government) ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act ) ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ.
2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ (Protest) ನಡೆದ ಕಾರಣ ಇಲ್ಲಿಯವರೆಗೆ ಸಿಎಎ ಜಾರಿಯಾಗಿರಲಿಲ್ಲ. ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಿಎಎ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಈಗ ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸುವ ಮೂಲಕ ತನ್ನಲ್ಲಿದ್ದ ದೊಡ್ಡ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಿದೆ.
ವೆಬ್ಸೈಟ್ ಕ್ರ್ಯಾಶ್:
ಸಿಎಎ ನಿಯಮ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರದ ಇ-ಗೆಜೆಟ್ ವೆಬ್ಸೈಟ್ ಕ್ರ್ಯಾಶ್ ಆಗಿದೆ. ಭಾರೀ ಸಂಖ್ಯೆಯಲ್ಲಿ ಜನರು ವೆಬ್ಸೈಟಿಗೆ ಭೇಟಿ ನೀಡಿದ ಪರಿಣಾಮ ವೆಬ್ಸೈಟ್ ಪುಟ ಓಪನ್ ಆಗುತ್ತಿಲ್ಲ.
ಸಿಎಎಯಲ್ಲಿ ಏನಿದೆ?
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರರಿಗೆ ಭಾರತದ ಪೌರತ್ವ (Citizenship) ನೀಡಲಾಗುತ್ತದೆ. 2014ರ ಡಿಸೆಂಬರ್ 31ಕ್ಕೆ ಮೊದಲು ರಕ್ಷಣೆ ಬಯಸಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿರುವ ಹಿಂದೂಗಳು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳಿಗೆ ಮಾತ್ರ ಸಿಎಎ ಅನ್ವಯ ಪೌರತ್ವ ನೀಡಲಾಗುತ್ತದೆ. ಪೌರತ್ವ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ನಲ್ಲಿಯೇ ಮುಗಿಯಲಿದ್ದು, ದೇಶದಲ್ಲಿರುವ ಮುಸ್ಲಿಮರಿಗೆ ಸಿಎಎಯಿಂದ ಯಾವುದೇ ತೊಂದರೆ ಆಗುವುದಿಲ್ಲ.