ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(DRDO) ಮತ್ತು ಭಾರತ್ ಡೈನಾಮಿಕ್ಸ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಮಹತ್ವಾಕಾಂಕ್ಷೆಯ ಮಿಷನ್ ದಿವ್ಯಾಸ್ತ್ರ (Mission Divyastra) ಯಶಸ್ವಿಯಾಗಿದೆ.
ಅತ್ಯಾಧುನಿಕ ಮಲ್ಟಿಪಲ್ ಇಂಡಿಪೆಂಡೆಂಟ್ ಟಾರ್ಗೆಟೆಬಲ್ ರೀ ಎಂಟ್ರಿ ವೆಹಿಕಲ್ (MIRV) ತಂತ್ರಜ್ಞಾನ ಒಳಗೊಂಡ ಅಗ್ನಿ5 ಕ್ಷಿಪಣಿ (Agni Missile) ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಡಿಆರ್ಡಿಓ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಒಡಿಶಾದ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಗ್ನಿ5ರ ಕ್ಷಿಪಣಿ ನೆರವಿನಿಂದ ಏಕಕಾಲದಲ್ಲಿ ಕನಿಷ್ಠ 2, ಗರಿಷ್ಠ 10 ಅಣ್ವಸ್ತ್ರ ಸಿಡಿತಲೆಗಳನ್ನು ಬೇರೆ ಬೇರೆ ಗುರಿಗಳ ಮೇಲೆ ಪ್ರಯೋಗಿಸಬಹುದಾಗಿದೆ.
ಏನಿದು MIRV ತಂತ್ರಜ್ಞಾನ?
ಸಾಧಾರಣವಾಗಿ ಕ್ಷಿಪಣಿಗಳಲ್ಲಿ ಇರುವ ಸಿಡಿತಲೆಗಳನ್ನು ಒಂದೇ ಗುರಿಯನ್ನು ಇರಿಸಿ ಉಡಾಯಿಸಲಾಗುತ್ತದೆ. ಆದರೆ MIRV ತಂತ್ರಜ್ಞಾನದಲ್ಲಿ ಅನೇಕ ಸಿಡಿತಲೆಗಳನ್ನು ಇಟ್ಟು ಬೇರೆ ಬೇರೆ ಗುರಿಗಳ ಮೇಲೆ ಪ್ರಯೋಗಿಸಬಹುದು ಇದರಿಂದಾಗಿ ಏಕಕಾಲದಲ್ಲಿ ಹಲವು ಗುರಿಗಳನ್ನು ಛೇದಿಸಬಹುದು.
ಲಾಭ ಏನು?
ಒಂದೇ ಪ್ರಯೋಗದಲ್ಲಿ ಹಲವು ಗುರಿಗಳನ್ನು ಧ್ವಂಸ ಮಾಡಬಹುದು. ಇದರಿಂದ ಪದೇ ಪದೇ ಕ್ಷಿಪಣಿಯನ್ನು ಉಡಾವಣೆ ಮಾಡಿ ಬೇರೆ ಗುರಿಯ ಮೇಲೆ ಪ್ರಯೋಗ ಮಾಡುವ ಅಗತ್ಯ ಇರುವುದಿಲ್ಲ. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಈ ತಂತ್ರಜ್ಞಾನ ನೆರವಿಗೆ ಬರಲಿದೆ. ಇದರಿಂದ ಕ್ಷಿಪಣಿ ಮತ್ತು ಲಾಂಚ್ ಮಾಡುವ ವ್ಯವಸ್ಥೆ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗಲಿದೆ.
ಯಾರ ಬಳಿಯಿದೆ?
ಈ ತಂತ್ರಜ್ಞಾನವನ್ನು 1960 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಈಗಾಗಲೇ ಅಮೆರಿಕ, ಯುಕೆ, ಫ್ರಾನ್ಸ್ ಬಳಿ MIRV ತಂತ್ರಜ್ಞಾನವಿದ್ದು ಸಬ್ಮರೀನ್ ಮೂಲಕ ಉಡಾವಣೆ ಮಾಡುವ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (Submarine-Launched Ballistic Missile) ಹೊಂದಿದೆ. ಚೀನಾದ ಜೊತೆ ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ (Intercontinental Ballistic Missile) ಇದ್ದರೆ ರಷ್ಯಾದ ಬಳಿ ಸಬ್ಮರೀನ್ ಜೊತೆಗೆ ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ ಇದೆ. ಪಾಕಿಸ್ತಾನವೂ MIRV ತಂತ್ರಜ್ಞಾನ ಇರುವ ಕ್ಷಿಪಣಿಯನ್ನು ಪ್ರಯೋಗ ಮಾಡುತ್ತಿದೆ.