ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೂಗಟ್ ಒಲಿಂಪಿಕ್ಸ್ಗೆ ನಡೆದ ಕುಸ್ತಿ ಆಯ್ಕೆ ಟ್ರಯಲ್ಸ್ನಲ್ಲಿ 50 ಕೆಜಿ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಕನಸನ್ನು ಜೀವಂತವಾಗಿಸಿಕೊಂಡಿದ್ದಾರೆ.
ಪಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಕುಸ್ತಿ ಟ್ರಯಲ್ಸ್ನಲ್ಲಿಸುಮಾರು ಮೂರು ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆಯಿತು. ಮೊದಲಿಗೆ ವಿನೇಶ್ ಫೋಗಟ್ ಕುಸ್ತಿಯಲ್ಲಿ ಪಾಲ್ಗೊಳ್ಳಲು ಒಪ್ಪದೇ ಹೈಡ್ರಾಮಾ ಸೃಷ್ಟಿಸಿದ್ರು. 53 ಮತ್ತು 50 ಕೆ.ಜಿ ಎರಡೂ ವಿಭಾಗದಲ್ಲಿ ಟ್ರಯಲ್ಸ್ಗೆ ಒಪ್ಪಿಗೆ ನೀಡುವಂತೆ ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಎರಡೂ ವಿಭಾಗದಲ್ಲಿ ಟ್ರಯಲ್ಸ್ನಲ್ಲಿ ಭಾಗವಹಿಸಲು ಅನುಮತಿ ನೀಡಿದ ನಂತರವೇ ಕಣಕ್ಕಿಳಿಯಲು ಮುಂದಾದರು. ಪ್ರತಿ ಬಾರಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಫೋಗಟ್ ಈ ಬಾರಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
53 ಕೆಜಿ ವಿಭಾಗದಲ್ಲಿ ವಿನೇಶ್ ಕೇವಲ 18 ಸೆಕೆಂಡುಗಳಲ್ಲೇ ಪರಾಭವಗೊಂಡರು. ಪ್ರತಿಸ್ಪರ್ಧಿ ಅಂಜು ಆಕೆಯನ್ನ ಸೋಲಿಸಿದರು. ಬಳಿಕ ವಿನೇಶ್ 50 ಕೆಜಿ ವಿಭಾಗದಲ್ಲಿ ಎದುರಾಳಿ ಶಿವಾನಿ ಅವರನ್ನ ಸೋಲಿಸಿದರು. 53 ಕೆಜಿ ವಿಭಾಗದಲ್ಲಿ 1-4ರಲ್ಲಿ ಸೋತಿದ್ದ ವಿನೇಶ್ ಬಳಿಕ ಶಿವಾನಿ ವಿರುದ್ಧ 11-6 ಅಂಕಗಳೊಂದಿಗೆ ಗೆದ್ದು ಕಂಬ್ಯಾಕ್ ಮಾಡಿದರು. ಒಲಿಂಪಿಕ್ಸ್ಗೂ ಮುನ್ನ ಕಿರ್ಗಿಸ್ತಾನದ ಬಿಷ್ಕೆಕ್ನಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ನಲ್ಲಿ ಫೋಗಟ್ ಪಾಲ್ಗೊಳ್ಳಲಿದ್ದಾರೆ.
ಇನ್ನೂ ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪೂನಿಯ ಮತ್ತು ರವಿ ದಹಿಯಾ ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಸೋಲು ಕಂಡ ಕಾರಣ ಇಬ್ಬರಿಗೂ ಭಾರೀ ಹಿನ್ನಡೆಯಾಗಿದೆ.