ಲೋಕಸಭಾ ಚುನಾವಣೆ (Lok Sabha Elections 2024) ಹೊತ್ತಲ್ಲೇ ಹರಿಯಾಣದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದೆ. ಹರಿಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ (M.L.Khattar) ಮತ್ತು ಸಚಿವ ಸಂಪುಟ ರಾಜೀನಾಮೆ ಸಲ್ಲಿಸಿದೆ.
ಮಂಗಳವಾರ ಬೆಳಗ್ಗೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ಖಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ. ಹರಿಯಾಣದ (Haryana) ನೂತನ ಮುಖ್ಯಮಂತ್ರಿ ಇಂದೇ (ಮಂಗಳವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
90 ಸದಸ್ಯ ಬಲದ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ ಎಂದು ಮೂಲಗಳು ತಿಳಿಸಿವೆ. ದುಶ್ಯಂತ್ ಚೌತಾಲಾ ಅವರ ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಇಲ್ಲಿಯವರೆಗೆ ಬಿಜೆಪಿ ಆಡಳಿತ ನಡೆಸುತ್ತಿತ್ತು.
ಹರಿಯಾಣದಲ್ಲಿ ಬಿಜೆಪಿ-ಜನನಾಯಕ ಜನತಾ ಪಕ್ಷ (ಜೆಜೆಪಿ)ಯ ಆಡಳಿತ ಸಮ್ಮಿಶ್ರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಎಲ್ಲಾ ಸಚಿವರು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.