ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸದ್ಯ ಸೈಲೆಂಟ್ ಆಗಿದ್ದಾರೆ. ಪುಷ್ಕರ್ ಇತ್ತೀಚೆಗೆ ಕೊಂಚ ಮಟ್ಟಿಗೆ ಸಿನಿಮಾಗಳಿಂದ ದೂರವಿದ್ದಾರೆ. ಇದೀಗ ನಟ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಕುರಿತು ಪುಷ್ಕರ್ ಪ್ರತಿಕ್ರಿಯಿಸಿದ್ದಾರೆ.
ಕಿರಿಕ್ ಪಾರ್ಟಿಯಂತಹ ಸೂಪರ್ ಹಿಟ್ ಸಿನಿಮಾವನ್ನು ನೀಡಿದ್ದ ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಧ್ಯೆ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೆಲವು ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಆ ಬಳಿಕ ಇಬ್ಬರು ಬೇರೆ ಬೇರೆಯಾಗಿದ್ದರು. ಈ ಮಧ್ಯೆ ಪುಷ್ಕರ್ ಮತ್ತೆ ರಕ್ಷಿತ್ ಜೊತೆ ಸಿನಿಮಾ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಪುಷ್ಕರ್ ಸದ್ಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
‘ನನ್ನ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ಯಾವುದೇ ಹೇಟ್ ರಿಲೇಶನ್ಶಿಪ್ ಇಲ್ಲ. ಇಬ್ಬರೂ ಗೌರವಯುತವಾಗಿ ನಮ್ಮದೇ ಸ್ಪೇಸ್ನಲ್ಲಿ ಇದ್ದೇವೆ. ರಕ್ಷಿತ್ ಶೆಟ್ಟಿ ಸಿನಿಮಾ ಮಾಡಲು 10-20 ನಿರ್ಮಾಪಕರು ರೆಡಿ ಇದ್ದಾರೆ. ನಾನು ಹಣ ಹಾಕ್ತೀನಿ ಡೇಟ್ ಕೊಡಿ ಎಂದು ಅವರು ಕೇಳುತ್ತಾ ಇರುತ್ತಾರೆ. ಹೀಗಾಗಿ, ತಕ್ಷಣಕ್ಕಂತೂ ಅವರಿಗೆ ಪುಷ್ಕರ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಅನಿವಾರ್ಯತೆ ಇಲ್ಲ’.
‘ನಾನು ಒಂದೊಳ್ಳೆಯ ಕಥೆ ತೆಗೆದುಕೊಂಡು ಬಂದು, ನನ್ನ ಪ್ರೊಡಕ್ಷನ್ನಿಂದ ಅವರಿಗೆ ಹೇಳಿ ಅದು ರಕ್ಷಿತ್ಗೆ ಇಷ್ಟವಾದರೆ ಬನ್ನಿ ಸಿನಿಮಾ ಮಾಡೋಣ ಎಂದರೆ ಅದು ವಿನ್ ವಿನ್ ಸಿಚ್ಯುವೇಷನ್ ಆಗುತ್ತದೆ. ಆದರೆ, ಅಂಥ ಕಥೆಯನ್ನು ಅವರಿಗೆ ಹೇಳಬೇಕು ಎನ್ನುವ ಪರಿಸ್ಥಿತಿ ನನಗೂ ಬಂದಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಅಂಥ ಸಮಯ ಬಂದರೆ ಇಬ್ಬರೂ ಒಂದಾಗಬಹುದು’ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.