ಬೆಂಗಳೂರು: ಲೋಕಸಭೆ ಚುನಾವಣೆಗೆ ಕರ್ನಾಟಕದ 20 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಬುಧವಾರ ರಾತ್ರಿ ಘೋಷಣೆ ಮಾಡಿದೆ. ಟಿಕೆಟ್ ವಂಚಿತರಿಂದ ಆಕ್ರೋಶ ಸ್ಫೋಟಗೊಂಡಿದ್ದು ಬಂಡಾಯದ ಕಹಳೆ ಊದಿದ್ದಾರೆ.
ಕೆಎಸ್ ಈಶ್ವರಪ್ಪ ಬಂಡಾಯ
ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ತ್ಯಾಗ ಮಾಡಿ, ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ, ರಾಜಕೀಯ ಜೀವನ ಕಲ್ಪಿಸಿಕೊಡಬೇಕೆಂದು ಬಯಸಿದ್ದರು.
ಜಗದೀಶ್ ಶೆಟ್ಟರ್
ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಜಗದೀಶ್ ಶೆಟ್ಟರ್ಗೆ ನಿರಾಸೆ ಆಗಿದೆ. ಇತ್ತ ಧಾರವಾಡವೂ ಇಲ್ಲ, ಅತ್ತ ಹಾವೇರಿಗೂ ಟಿಕೆಟ್ ಸಿಗದೇ ಶೆಟ್ಟರ್ ಅತಂತ್ರರಾಗಿದ್ದಾರೆ
ಜೆಸಿ ಮಾಧುಸ್ವಾಮಿ ಬಂಡಾಯ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತುಮಕೂರು ಲೋಕಸಭಾ ಟಿಕೆಟ್ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅಲ್ಲಿ ವಿ. ಸೋಮಣ್ಣಗೆ ಟಿಕೆಟ್ ಕೊಟ್ಟಿದ್ದಾರೆ
ಎಂಪಿ ರೇಣುಕಾಚಾರ್ಯ
ದಾವಣಗೆರೆಯಲ್ಲಿ ಜಿ.ಎಂ.ಸಿದ್ಧೇಶ್ವರ್ ಮತ್ತು ಅವರ ಕುಟುಂಬಕ್ಕೆ ಟಿಕೆಟ್ ಕೊಡಬಾರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದರು. ಆದರೆ ಈಗ, ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಟಿಕೆಟ್ ನೀಡಲಾಗಿದೆ
ಸಂಗಣ್ಣ ಕರಡಿ ಬಂಡಾಯ
ಕೊಪ್ಪಳದ ಲೋಕಸಭಾ ಟಿಕೆಟ್ ಕೈ ತಪ್ಪಿರೋದಕ್ಕೆ ಕರಡಿ ಸಂಗಣ್ಣ ಬೆಂಬಲಿಗರ ಸಿಟ್ಟು ಸ್ಫೋಟಗೊಂಡಿದೆ. ಅತ್ತ ಟಿಕೆಟ್ ವಂಚಿತ ಕರಡಿ ಸಂಗಣ್ಣ ಮಾಧ್ಯಮದ ಮುಂದೆ ಬೇಸರ ಹೊರಹಾಕದೇ ಇದ್ದರೂ, ತಮ್ಮ ಬೆಂಬಲಿಗರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ.