2024ರ ಲೋಕಸಭೆ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಏ.26 ಕ್ಕೆ ಮೊದಲ ಹಾಗೂ ಮೇ 7 ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದಿನಾಂಕಗಳನ್ನು ಪ್ರಕಟಿಸಿದ ಸಮಯದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಎಂಬ ನಾಲ್ಕು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ದಿನಾಂಕವನ್ನೂ ಚುನಾವಣಾ ಆಯೋಗ ಪ್ರಕಟಿಸಿದೆ.
ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮೊದಲು ಚುನಾವಣಾ ಸಿದ್ಧತೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಾತುಗಳನ್ನು ಆರಂಭಿಸಿದ ಕುಮಾರ್, ಚುನಾವಣೆಗಳು ಒಂದು ರೀತಿಯ ಹಬ್ಬವಾಗಿರುವ ಭಾರತದತ್ತ ಎಲ್ಲರ ಕಣ್ಣು ನೆಟ್ಟಿದೆ. ನಿಜವಾದ ಹಬ್ಬದ ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಚುನಾವಣೆ ನಡೆಸುವುದಾಗಿ ನಾವು ಭರವಸೆ ನೀಡುತ್ತೇವೆ. ಪ್ರತಿ ಚುನಾವಣೆಯು ಹೊಸ ಪರೀಕ್ಷೆಯಾಗಿದೆ, ಇಡೀ ಕಾರ್ಯವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ ಎಂದಿದ್ದಾರೆ.